ನವದೆಹಲಿ: ವಿದೇಶಿ ಸಂಸ್ಥೆಯೊಂದು ವಿಶ್ವದ ಪ್ರಸಿದ್ಧ 100 ನಗರಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರು ಸ್ಥಾನ ಪಡೆದಿದೆ.
ಇಂಗ್ಲೆಂಡ್ ಮೂಲದ ಗ್ಲೋಬಲ್ ಮಾರ್ಕೆಟ್ ರಿಸರ್ಚ್ ಕಂಪನಿ ಯೂರೋಮಾನಿಟರ್ ಇಂಟರ್‍ನ್ಯಾಷನಲ್ ಸ್ಟೇಟ್ಸ್ ವಿಶ್ವದ 100 ಜನಪ್ರಿಯ ನಗರಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ದೇಶದ 7 ನಗರಗಳು ಸ್ಥಾನ ಪಡೆದಿವೆ.
ಪಟ್ಟಿಯಲ್ಲಿ ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಆಗ್ರಾ, ಚೆನ್ನೈ, ಜೈಪುರ, ಕೊಲ್ಕತ್ತಾ, ಬೆಂಗಳೂರು ಸ್ಥಾನ ಪಡೆದಿದೆ. ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಬೆಂಗಳೂರು ಪಟ್ಟಿಯಲ್ಲಿ 100ನೇ ಸ್ಥಾನ ಪಡೆದುಕೊಂಡಿದೆ.
ವಿಶ್ವ ಮಟ್ಟದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಪಟ್ಟಿಯಲ್ಲಿ ದೆಹಲಿ ಪ್ರಸ್ತುತ 11ನೇ ಸ್ಥಾನದಲ್ಲಿದ್ದು, 2019ರ ವರದಿಯಲ್ಲಿ 8ನೇ ಸ್ಥಾನಕ್ಕೇರಲಿದೆ ಎಂದು ಸಂಸ್ಥೆ ಅಂದಾಜಿಸಿದೆ. ವಿದೇಶಿಗರು ಹೆಚ್ಚು ಭೇಟಿ ನೀಡುವ ಮೂಲಕ ದೆಹಲಿ ಜನಪ್ರಿಯ ನಗರವಾಗಿದೆ. ಈ ಮೂಲಕ ಪ್ರವಾಸೋದ್ಯಮ ಮೂಲಸೌಕರ್ಯ ಹಾಗೂ ವಿಶ್ವದರ್ಜೆಯ ವಿಮಾನ ನಿಲ್ದಾಣ, ಐಶಾರಾಮಿ, ವೈದ್ಯಕೀಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರವಾಸದಲ್ಲಿ ಅಭಿವೃದ್ಧಿಯಾಗಿರುವುದಕ್ಕೆ ಈ ಸ್ಥಾನವೇ ಸಾಕ್ಷಿ ಎಂದು ಹೇಳಿದೆ.
ವಾಣಿಜ್ಯ ನಗರಿ ಮುಂಬೈ ಪ್ರಸ್ತುತ 14ನೇ ಸ್ಥಾನದಲ್ಲಿದ್ದು, 2019ರಲ್ಲಿ ಇದು ಇನ್ನೂ ಮೇಲಕ್ಕೇರಲಿದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷದಲ್ಲಿ 12.31 ಕೋಟಿ ಪ್ರವಾಸಿಗರನ್ನು ಮುಂಬೈ ಸೆಳೆಯುತ್ತದೆ ಎಂದು ಉಲ್ಲೇಖಿಸಲಾಗಿದೆ.
ನಂತರ ತಾಜ್ ಮಹಲ್ ಖ್ಯಾತಿಯ ಆಗ್ರಾ ಸ್ಥಾನ ಪಡೆದಿದ್ದು, 26ನೇ ರ್ಯಾಂಕ್ ಪಡೆದಿದೆ. ಆಗ್ರಾ 2018ರಲ್ಲಿ ಒಟ್ಟು 57 ಕೋಟಿ ಪ್ರವಾಸಿಗರನ್ನು ಸ್ವಾಗತಿಸಿದೆ. ಆಗ್ರಾ ನಂತರ ಚೆನ್ನೈ ಸ್ಥಾನ ಪಡೆದಿದ್ದು, ಚೆನ್ನೈ ಪ್ರಸ್ತುತ 36ನೇ ಸ್ಥಾನದಲ್ಲಿದ್ದು, 2019ರಲ್ಲಿ 31ನೇ ಸ್ಥಾನಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.
34ನೇ ಸ್ಥಾನ ಜೈಪರಕ್ಕೆ ಸಿಕ್ಕಿದರೆ ಕೋಲ್ಕತ್ತಾ ನಗರ 76ನೇ ಸ್ಥಾನ ಪಡೆದಿದೆ. ಮುಂಬರುವ ವರ್ಷದಲ್ಲಿ 74ನೇ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಿದೆ.
ವರದಿಯ ಪ್ರಕಾರ ಒಟ್ಟು 100 ನಗರಗಳ ಪೈಕಿ ಏಷ್ಯಾದ 43 ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಮೂಲಕ ಹೆಚ್ಚು ಪ್ರಸಿದ್ಧ ನಗರಗಳನ್ನು ಹೊಂದಿದ ಖಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಮೀಕ್ಷೆಗೆ ಒಟ್ಟು 400 ನಗರಗಳನ್ನು ಆಯ್ಕೆ ಮಾಡಿಕೊಂಡಿತ್ತು. ಈ ನಗರಗಳಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ಮತ್ತು 1 ವರ್ಷಕ್ಕಿಂತ ಕಡಿಮೆ ಸಮಯ ತಂಗಿದ್ದ ಪ್ರವಾಸಿಗರನ್ನು ಸಂದರ್ಶಿಸಿ ಟಾಪ್ 100 ನಗರದಗಳ ಪಟ್ಟಿಯನ್ನು ತಯಾರಿಸಲಾಗಿದೆ.
ವಿದೇಶಿ ನಗರಗಳ ಪೈಕಿ ಪ್ರತಿಭಟನೆ ನಡೆಯುತ್ತಿದ್ದರೂ ಹಾಂಕಾಂಗ್ ವಿಶ್ವದ ಅತ್ಯಂತ ಪ್ರಸಿದ್ಧ ನಗರವಾಗಿ ಮುಂದುವರಿದಿದೆ. ಉಳಿದಂತೆ ಬ್ಯಾಂಕಾಕ್, ಲಂಡನ್, ಮಕಾವ್, ಸಿಂಗಪೂರ್ ಸ್ಥಾನ ಪಡೆದಿವೆ. ಅಮೇರಿಕದ ಪ್ರಸಿದ್ಧ ನ್ಯೂಯಾರ್ಕ್ ನಗರ ಸ್ಥಾನ ಕೆಳಗಿಳಿದಿದ್ದು, 8ರಿಂದ 11ನೇ ಸ್ಥಾನಕ್ಕೆ ಕುಸಿದಿದೆ.