ಟೊಮೆಟೋ ಬೆಲೆ ತೀವ್ರ ಕುಸಿತ- ರೈತ ಕಂಗಾಲು

By
2 Min Read

ಕೋಲಾರ: ಟೊಮೆಟೋ ಬೆಳೆ ಅಂದರೆ ಅದು ಕೆಂಪು ಚಿನ್ನದ ವಹಿವಾಟು, ಇನ್ನೊಂದು ಅರ್ಥದಲ್ಲಿ ಟೊಮೆಟೋ ಬೆಳೆಯೋದು ಜೂಜು ಎನ್ನಲಾಗುತ್ತದೆ. ಆ ಬೆಳೆಯನ್ನು ನಂಬಿದ ಅದೆಷ್ಟೋ ರೈತರು ಕೈತುಂಬಾ ಹಣ ನೋಡಿದವರಿದ್ದಾರೆ, ಅಷ್ಟೇ ಮಂದಿ ಕೈಸುಟ್ಟುಕೊಂಡವರೂ ಇದ್ದಾರೆ.

ಚಿನ್ನದ ನಾಡು ಕೋಲಾರದಲ್ಲಿ ಕೆಜಿಎಫ್ ಚಿನ್ನದ ಗಣಿ ಬಿಟ್ಟರೆ ಕೆಂಪು ಚಿನ್ನ ಎಂದು ಕರೆಯಲ್ಪಡುವ ಟೊಮೆಟೋ ಬೆಳೆ ಕೂಡ ಇಲ್ಲಿಯ ಜನರಿಗೆ ಒಂದು ಪ್ರಮುಖ ಬೆಳೆ. ಜಿಲ್ಲೆಯೊಂದರಲ್ಲಿಯೇ ಅಂದಾಜು 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋವನ್ನು ಬೆಳೆಯುತ್ತಾರೆ. ಬೇರೆ ಯಾವ ಜಿಲ್ಲೆಯಲ್ಲಿಯೂ ಬೆಳೆಯದಷ್ಟು ಟೊಮೆಟೋ ಇಲ್ಲಿಯ ರೈತರು ಬೆಳೆಯುತ್ತಾರೆ. ಇದಕ್ಕೆ ಕೋಲಾರದಲ್ಲಿ ಇರುವ ಎಪಿಎಂಸಿ ಮಾರುಕಟ್ಟೆ ಪ್ರಮುಖವಾಗಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

ಸಾವಿರಾರು ಸಂಖ್ಯೆಯಲ್ಲಿ ರೈತರು ತಾವು ಬೆಳೆದ ಟೊಮೆಟೋವನ್ನು ನಗರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಾರೆ. ಆದರೆ ಕಳೆದ ತಿಂಗಳಲ್ಲಿ 15 ಕೆಜಿಯ ಒಂದು ಕ್ರೇಟ್ ಟೊಮೆಟೋ ಬೆಲೆ ಒಂದು ಸಾವಿರ ದಾಟಿತ್ತು. ಕೊರೊನಾ ಮತ್ತು ಅತಿಯಾದ ಮಳೆ ಬಳಿಕ ಕೆಲ ರೈತರು ಟೊಮೆಟೋ ಬೆಳೆಯಲ್ಲಿ ಕೈತುಂಬಾ ಹಣ ನೋಡಿದ್ದರು. ಆದರೆ ಒಂದೇ ತಿಂಗಳ ಅಂತರದಲ್ಲಿ ಈಗ ಅದರ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, 15 ಕೆಜಿಯ ಟೊಮೆಟೋ ಬಾಕ್ಸ್ 10 ರೂಪಾಯಿಂದ 100 ರೂಪಾಯಿಗೆ ಮಾರಾಟವಾಗುತ್ತಿದೆ. ಅಂದರೆ ಒಂದು ಕೆಜಿ ಟೊಮೆಟೋ ಬೆಲೆ ಕೇವಲ ಎರಡು ರೂಪಾಯಿಯಿಂದ ಆರಂಭವಾಗುತ್ತಿದೆ. ಇದನ್ನೂ ಓದಿ: ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

ಇನ್ನೂ ಹಿಂದಿನ ದಿನಗಳಲ್ಲಿ ಕೃಷಿಯಲ್ಲಿ ತೊಡಗಿದ್ದವರು ಹಲವು ಕಾರಣಗಳಿಂದ ಉದ್ಯೋಗ ಅರಸಿಕೊಂಡು ಜಿಲ್ಲೆ ತೊರೆದು ಬೆಂಗಳೂರು ಸೇರಿದರು. ಕೊರೊನಾದಿಂದ ಈಗ ಜಿಲ್ಲೆಗೆ ವಾಪಾಸಗಿ ತಮ್ಮ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಟೊಮೆಟೋ ಬೆಳೆಯುವರ ಸಂಖ್ಯೆ ಕೂಡ ಈಗ ಹೆಚ್ಚಾಗಿದೆ. ಅಷ್ಟೆ ಅಲ್ಲ ಜಿಲ್ಲೆಗೆ ಕಳೆದ ಋತುವಿನಲ್ಲಿ ಅತ್ಯುತ್ತಮ ಮಳೆ ಆಗಿದೆ. ಜೊತೆಗೆ ಕೆ.ಸಿ.ವ್ಯಾಲಿ ನೀರು ಕೂಡ ಕೆರೆಗಳು ತುಂಬಲು ಕಾರಣವಾಗಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ ಟೊಮೆಟೋ ಬೆಳೆ ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಪರಿಣಾಮ ಮಾರುಕಟ್ಟೆಗೆ ಭಾರೀ ಪ್ರಮಾಣದ ಟೊಮೆಟೋ ಬರುತ್ತಿದ್ದು, ಕೊಳ್ಳುವವರಿಲ್ಲದಂತ್ತಾಗಿದೆ.

ಪರಿಣಾಮ ಬೆಲೆ ಕುಸಿತವಾಗಿದ್ದು, ಕೊಂಚ ಹಣ ನೋಡುವ ಆಸೆಯಿಂದ ಟೊಮೆಟೋ ಬೆಳೆಗೆ ಮುಂದಾದ ರೈತರು ಈಗ ಕಣ್ಣೀರು ಹಾಕುವಂತಾಗಿದೆ. ಎಕರೆ ಒಂದಕ್ಕೆ ಎರಡು ಲಕ್ಷ ಖರ್ಚುಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಸಂಗ್ರಹ ಮಾಡಲು ವ್ಯವಸ್ಥೆ ಇಲ್ಲದೆ ಕಡಿಮೆ ಬೆಲೆಗೆ ಮಾರುವ ಅನಿವಾರ್ಯತೆ ರೈತರಿಗೆ ಇದ್ದು, ರೈತರ ನೆರವಿಗೆ ಸರ್ಕಾರ ಬರಬೇಕು ಅನ್ನೋದು ವರ್ತಕರ ಮಾತು.

ಒಟ್ಟಿನಲ್ಲಿ ಟೊಮೆಟೋ ಬೆಳೆಯೇ ಹಾಗೇ ಒಂಥರಾ ಜೂಜಾಟದಂತೆ ಅಪರೂಪಕ್ಕೆ ಒಮ್ಮೆ ಕೆಂಪು ಚಿನ್ನದಲ್ಲಿ ಹಣ ಸಂಪಾದನೆಯಾದರೆ ಅತೀ ಹೆಚ್ವು ಸಲ ಬೆಲೆ ಕುಸಿತವೇ ಕಾಣಬೇಕಿದೆ. ಹೀಗಾಗಿ ಸರ್ಕಾರ ಕೂಡ ಟೊಮೆಟೋ ಬೆಳೆಗಾರ ಸಹಾಯಕ್ಕೆ ಬರಬೇಕು, ಟೊಮೆಟೋ ನಿಗಮ ಅಥವಾ ಮಂಡಳಿ ಸ್ಥಾಪನೆ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.

Share This Article
Leave a Comment

Leave a Reply

Your email address will not be published. Required fields are marked *