ಕರ್ನಾಟಕ ಹೈಕೋರ್ಟ್ ಗೆ ಜಡ್ಜ್ ನೇಮಿಸಿ: ಕಾನೂನು ಸಚಿವರಲ್ಲಿ ಡಿವಿಎಸ್ ಮನವಿ

Public TV
2 Min Read

ನವದೆಹಲಿ: ಕರ್ನಾಟಕ ಹೈ ಕೋರ್ಟ್ ನಲ್ಲಿ ಖಾಲಿ ಇರುವ ನ್ಯಾಯಾಧೀಶ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರದ ಮಾಜಿ ಕಾನೂನು ಸಚಿವ ಹಾಲಿ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಲ್ಲಿ ಮನವಿ ಮಾಡಿದ್ದಾರೆ.

ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ಹಿರಿಯ ವಕೀಲರು ನಡೆಸುತ್ತಿರುವ ಸರಣಿ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಇಂದು ಸದಾನಂದಗೌಡ ಮತ್ತು ರವಿಶಂಕರ್ ಪ್ರಸಾದ್ ಚರ್ಚಿಸಿದರು. ಸದಾನಂದಗೌಡರು ಈ ಕುರಿತು ವಿವರಗಳನ್ನು ಕಾನೂನು ಸಚಿವರಿಗೆ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದರು.

ಸತ್ಯಾಗ್ರಹಕ್ಕೆ ಸ್ಟೇಜ್ ಹಾಕಿರುವ ಅಡ್ವೋಕೇಟ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು(ಎಎಬಿ) ಬೆಳಗ್ಗೆ 10:30 ರಿಂದ 5:30 ರ ವರೆಗೆ ಒಂದು ವಾರದ ಕಾಲ ಧರಣಿ ಮಾಡಲಿದ್ದು, ಪ್ರತಿಭಟನೆಗೆ ಸರ್ಕಾರ ಮಣಿಯದೆ ಹೋದರೆ ಇಡೀ ರಾಜ್ಯಾದ್ಯಂತ ಕೋರ್ಟ್ ಕಲಾಪ ಬಹಿಷ್ಕಾರ ಮಾಡುವುದಾಗಿ ಹಿರಿಯ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆ ಏನು?
ಹೈಕೋರ್ಟ್ ನ್ಯಾಯಾಧೀಶ ಹುದ್ದೆ ಖಾಲಿ ಇರುವುದರಿಂದ ಸುಮಾರು 3 ಲಕ್ಷ ಪ್ರಕರಣಗಳು ವಿಲೇವಾರಿಯಾಗದೇ ಉಳಿದಿದ್ದು, ವಕೀಲರಿಗೆ ಹಾಗೂ ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರು ವಕೀಲರ ಸಂಘವು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕೇಂದ್ರ ಕಾನೂನು ಮಂತ್ರಿ ಮತ್ತು ಅಟಾರ್ನಿ ಜನರಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.

ಸುಪ್ರೀಂ ಕೋರ್ಟ್ ಕರ್ನಾಟಕದ ಹೈಕೋರ್ಟ್ ಗೆ 62 ನ್ಯಾಯಮೂರ್ತಿಗಳನ್ನು ಅನುಮೋದಿಸಿದೆ. ಪ್ರಸ್ತುತ 24 ನ್ಯಾಯಮೂರ್ತಿಗಳೂ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 8 ನ್ಯಾಯಮೂರ್ತಿಗಳು ಧಾರವಾಡ ಮತ್ತು ಕಲಬುರುಗಿ ಸಂಚಾರಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಿನ್ಸಿಪಲ್ ಬೆಂಚ್‍ನಲ್ಲಿ 16 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 38 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ.

ನೆರೆಯ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಗೆ ಹೋಲಿಸಿದರೆ ರಾಜ್ಯದ ಹೈಕೋರ್ಟ್ ನಲ್ಲಿ ಸುಮಾರು ಶೇ.60 ರಷ್ಟು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಪ್ರಕರಣಗಳು ನಿಗದಿತ ಸಮಯಕ್ಕೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರದೆ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *