ತಲಕಾವೇರಿಯಲ್ಲಿ ತೀರ್ಥೋದ್ಭವ ತಯಾರಿ – ಮಧ್ಯರಾತ್ರಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ

Public TV
1 Min Read

ಮಡಿಕೇರಿ: ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಮಧ್ಯರಾತ್ರಿ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರಲಿದೆ. ಈ ವಿಸ್ಮಯ ನೋಡಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ನೆರವೇರಲಿದೆ.

ಇಂದು ಸಂಜೆ ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ನಾನಾ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ ಕಾವೇರಿ ಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಮಂಡ್ಯ, ಮೈಸೂರು, ಹಾಸನ ಸೇರಿ ರಾಜ್ಯ, ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸಲಿದ್ದು, ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಕಾವೇರಿ ಮಾತೆಯ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಈಗಾಗಲೇ ಲೈಟಿಂಗ್ ವ್ಯವಸ್ಥೆ, ಭದ್ರತೆಗಾಗಿ ಸಿಸಿಟಿವಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.

ತಲಕಾವೇರಿಯಲ್ಲಿ ಭಕ್ತರು ತೀರ್ಥಸ್ವರೂಪಿಣಿ ಕಾವೇರಿಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ತೀರ್ಥೋದ್ಭವದ ವಿಸ್ಮಯವನ್ನ ನೋಡಲು ಭಕ್ತರ ದಂಡೇ ತಲಕಾವೇರಿಗೆ ಆಗಮಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *