ಕಾರ್ಗಿಲ್ ವಿಜಯೋತ್ಸವ – ದೇಶದೆಲ್ಲೆಡೆ ಮುಗಿಲು ಮುಟ್ಟಲಿದೆ ಸಂಭ್ರಮ

Public TV
2 Min Read

ನವದೆಹಲಿ: ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ವೀರ ಸೈನಿಕರ ತ್ಯಾಗ ಮತ್ತು ಬಲಿದಾನ ನೆನಪಿಸುವುದರ ಜೊತೆಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ 2 ದಿನ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.

ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ `ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಮಾಡಲಾಗುತ್ತಿದೆ. ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

ಜುಲೈ 14ರಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು `ವಿಕ್ಟರ್ ಫ್ಲೇಮ್’ ಅನ್ನು ಬೆಳಗಿಸಿದ್ದರು. ಈ ಜ್ಯೋತಿ ದೇಶದ ಪ್ರಮುಖ ನಗರಗಳಲ್ಲಿ ಸಂಚರಿಸಿದೆ. ಸುಮಾರು 25 ದಿನಗಳ ಕಾಲ ನಡೆದಿದ್ದ ಯುದ್ಧದಲ್ಲಿ ಪಾಕ್ ಸೇನಾಪಡೆ ಹಾಗೂ ಉಗ್ರವಾದಿಗಳನ್ನು ನಮ್ಮ ಸಿಪಾಯಿಗಳು ಹಿಮ್ಮೆಟ್ಟಿಸಿದ್ದರು. ಇದಕ್ಕೆ ಆಪರೇಷನ್ ವಿಜಯ್ ಅಂತ ಹೆಸರಿಡಲಾಗಿತ್ತು.

ಉರಿ ರಿಲೀಸ್:
ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ‘ಉರಿ ದಿ ಸರ್ಜಿಕಲ್ ಸ್ಟೈಕ್’ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಜನವರಿ 11ರಂದು ಬಿಡುಗಡೆಯಾಗಿದ್ದ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈಗ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಈ ಚಿತ್ರ ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ. 2019ರ ಹೊಸ ವರ್ಷವನ್ನು ಬಾಲಿವುಡ್ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಮೂಲಕ ಬರಮಾಡಿಕೊಂಡಿತ್ತು.

ಯುದ್ಧ ನಡೆದಿದ್ದು ಯಾವಾಗ..?
1999ರ ಮೇ ಮತ್ತು ಜುಲೈ ಈ 2 ತಿಂಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು. ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ `ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಕಾರ್ಗಿಲ್ ಯುದ್ಧದಲ್ಲಿ ಭಾರತದ 600ಕ್ಕೂ ಅಧಿಕ ವೀರ ಸೈನಿಕರು ಹುತಾತ್ಮರಾಗಿ, 1200ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡಿಕೊಳ್ಳುತ್ತಾ ಸೇನೆ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *