ಬೆಂಗಳೂರು: ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪರಂಪರೆಯ ಹೆಗ್ಗುರುತು ಸಾರುವ ಬೆಂಗಳೂರು ಕರಗ (Bengaluru Karaga) ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗಕ್ಕೆ ಇನ್ನೂ 1 ದಿನ ಬಾಕಿಯಿರುವ ಹಿನ್ನೆಲೆ ಹೂವಿನ ಕರಗಕ್ಕೂ ಮುನ್ನ ಇಂದು ದ್ರೌಪದಿ ದೇವಿ ಹಸಿ ಕರಗ ಶಕ್ತ್ಯೋತ್ಸವ ನೆರವೇರಿಸಲಾಯಿತು.
ಬೆಂಗಳೂರು ಕರಗ ಮಹೋತ್ಸವದ ಪ್ರಮುಖ ಭಾಗವಾದ ಹಸಿ ಕರಗ ಇಂದು ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಆರಂಭಗೊಂಡು, ಧರ್ಮರಾಯಸ್ವಾಮಿ ದೇವಾಲಯದಲ್ಲಿ (Dharmaraya swamy temple) ರಾತ್ರಿಯಿಡೀ ನಡೆಯುವ ವಿಶೇಷ ಪೂಜೆಗೆ ಸಜ್ಜಾಯಿತು. ಇದನ್ನೂ ಓದಿ: ಪೈಲ್ವಾನ್ ಬಳಿಕ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಮನವೊಲಿಕೆಗೆ `ಕೈ’ ಕಸರತ್ತು
ಇಂದು ಬೆಳಗ್ಗಿನ ಜಾವ 3 ಗಂಟೆಯಿಂದಲೇ ಹಸಿಕರಗ ಶುರುವಾಯಿತು. ಕರಗದ ಕುಂಟೆಯಲ್ಲಿ ಗಂಗೆ ಪೂಜೆ ಮುಗಿಸಿ, ನಗರದ ಪೇಟೆ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕಿ ಧರ್ಮರಾಯ ದೇವಸ್ಥಾನ ತಲುಪಿತು. ದೇವಸ್ಥಾನ ಪ್ರದಕ್ಷಿಣೆ ವೇಳೆ ಲಕ್ಷಾಂತರ ಭಕ್ತರು ಹಸಿಕರಗ ಕಣ್ತುಂಬಿಕೊಂಡು ಭಕ್ತಿಭಾವ ಮೆರೆದರು. ಇಂದು ಮಧ್ಯಾಹ್ನ ಪೊಂಗಲ್ ಸೇವೆ ಬಳಿಕ ನಾಳೆ (ಏ.1) ಕರ್ಪೂರ ಪೂಜೆ ನೆರವೇರಲಿದ್ದು, ರಾತ್ರಿ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ನೆರವೇರಲಿದೆ. ಇದನ್ನೂ ಓದಿ: ಮಹಾವೀರ ಜಯಂತಿ ಮೆರವಣಿಗೆ – ಗಮನ ಸೆಳೆದ ಬುರುಡೆ ಕೇಸ್ ಟ್ಯಾಬ್ಲೋ
ಹಸಿಕರಗದ ಶಕ್ತಿ ಏನು?
ಚಿತ್ರಪೌರ್ಣಮಿಗೆ 3 ದಿನ ಮೊದಲು ದ್ರೌಪದಿ ದೇವಿ ಭೂಮಿಗೆ ಬರುತ್ತಾಳೆ. ಮಗುವಿನ ರೂಪದಲ್ಲಿ ದ್ರೌಪದಿ ದೇವಿ ಬಂದು ಹಸಿಕರಗದಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಈಗಲೂ ಇದೆ. ಅದಕ್ಕಾಗಿ ಹೂವಿನ ಕರಗಕ್ಕೂ ಮುನ್ನ ಹರಿಕರಗ ಶಕ್ತ್ಯೋತ್ಸವ ನೆರವೇರಿಸಲಾಗುತ್ತದೆ.
ಕಗರಕ್ಕೆ ಏನೇನು ಸಿದ್ಧತೆ?
ಏಪ್ರಿಲ್ 1ರಂದು ರಾತ್ರಿ ನಡೆಯುವ ಕರಗ ಉಧಿತ್ಸವ ಮತ್ತು ಮಹಾರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಅಂದು ಹೆಚ್ಚಿನ ಜನರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮೊಬೈಲ್ ಟಾಯ್ಲೆಟ್‌ಗಳು, ಕುಡಿಯುವ ನೀರಿನ ವ್ಯವಸ್ಥೆ, ಕರಗ ಸಾಗುವ ಹಾದಿಯುದ್ದಕ್ಕೂ ವಿದ್ಯುದ್ದೀಪಗಳಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವುದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು, ಸ್ವಚ್ಛತೆಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ.
ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು, ಸಾರ್ವಜನಿಕರು, ಕರಗದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ದೇವಾಲಯದಲ್ಲಿ ಪೂಜಾ-ಕೈಂಕರ್ಯಗಳನ್ನು ವ್ಯವಸ್ಥಿತವಾಗಿ ನಡೆಸಲು ಸೂಚನೆ ನೀಡಲಾಗಿದೆ.
ಕರಗ ಹೊರಡುವ ಮತ್ತು ಹಿಂದಿರುಗುವ ರಸ್ತೆಗಳಲ್ಲಿ ಸಂಗ್ರಹವಾಗುವ ಕಸವನ್ನು ಆಗಿಂದಾಗ್ಗೆ ವಿಲೇವಾರಿ ಮಾಡಿ ರಸ್ತೆಗಳನ್ನು ಸ್ವಚ್ಛವಾಗಿಡಲು ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಲಾಗಿದೆ.




