ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

Public TV
2 Min Read

– ನಾವೆಲ್ಲರೂ ಕನಸು ಕಾಣುತ್ತಿದ್ದ ತೀರ್ಪು ಇಂದು ಪ್ರಕಟ
– ಅಂದು ಕಟ್ಟುಕಥೆ ಎಂದು ನಮ್ಮನ್ನು ತೆಗಳಿದರು

ನವದೆಹಲಿ: ರಾಮ ಮಂದಿರದ ಅವಶೇಷಗಳ ಮೇಲೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ ಏಕೈಕ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್. ಆದರೆ ಸುಮಾರು ಮೂರು ದಶಕಗಳಿಂದ ಮೊಹಮ್ಮದ್ ಅವರ ಹೇಳಿಕೆಗೆ ತೀವ್ರವಾಗಿ ಟೀಕೆಗಳು ಕೇಳಿ ಬಂದಿದ್ದವು. ಈಗ ಅವರು ನೀಡಿದ ಅನೇಕ ಆಧಾರಗಳ ಮೇಲೆ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದವನ್ನು ಇತ್ಯರ್ಥಗೊಳಿಸಿ ತೀರ್ಪು ನೀಡಿದೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆ.ಕೆ.ಮುಹಮ್ಮದ್, ಅಯೋಧ್ಯೆಯ ಬಾಬರಿ ಮಸೀದಿಗೂ ಮುಂಚೆಯೇ ರಾಮ ಮಂದಿರ ಇತ್ತು ಎಂದು ಹೇಳಿದ್ದಕ್ಕೆ ಅಂದು ನೂರಾರು ಜನರು ನನ್ನನ್ನು ಸುತ್ತುವರಿದಿದ್ದರು. ಅವರು ನನ್ನ ವಿರುದ್ಧ ಎಲ್ಲಾ ರೀತಿಯ ಸಂಚು ರಚಿಸಿದರು. ಗೌರವಾನ್ವಿತ ಸುಪ್ರೀಂ ಕೋರ್ಟ್ ಇಂದು ನಾನು ಸಲ್ಲಿಸಿದ ದಾಖಲೆಗಳನ್ನು ಮಾನ್ಯ ಮಾಡಿದೆ. ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‍ಐ) ತಯಾರಿಸಿದ ಸಾಕ್ಷ್ಯಗಳ ತುಣುಕುಗಳು ಸರಿಯೆಂದು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಮಸೀದಿಯನ್ನು ದೇವಾಲಯದ ಮೇಲೆ ಮಾತ್ರವಲ್ಲದೆ ದೇವಾಲಯದ ಕೆಲವು ಅವಶೇಷಗಳನ್ನು ಮಸೀದಿ ನಿರ್ಮಿಸಲು ಬಳಸಲಾಗಿದೆಯೆಂದು ತೋರಿಸಿದ ಹಲವಾರು ಪುರಾವೆಗಳು ಇದ್ದವು. ಉದಾಹರಣೆಗೆ ರಾಮ ದೇವಾಲಯಗಳ 14 ಸ್ತಂಭಗಳ ಬೆಂಬಲದೊಂದಿಗೆ ಮಸೀದಿಯ ಗೋಡೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಈ ಸ್ತಂಭಗಳ ಕೆಳಗೆ 11ರಿಂದ 12ನೇ ಶತಮಾನದ ದೇವಾಲಯದ ಕುರುಹುಗಳನ್ನು ನಾನು ನೋಡಿದೆ ಎಂದು ಮುಹಮ್ಮದ್ ನೆನೆದರು.

ಎಎಸ್‍ಐ ಉತ್ಖನನ ವರದಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯದಿದ್ದರೆ, ನಮ್ಮ ಹಕ್ಕನ್ನು ಯಾವಾಗಲೂ ಸುಳ್ಳು ಮತ್ತು ಕಟ್ಟು ಕಥೆಗಳಂತೆ ನೋಡಲಾಗುತ್ತಿತ್ತು. ಇದು ಹೆಚ್ಚು ಸಮತೋಲಿತ ಮತ್ತು ಪರಿಪೂರ್ಣ ತೀರ್ಪು. ಇದು ನಾವೆಲ್ಲರೂ ಕನಸು ಕಾಣುತ್ತಿದ್ದ ತೀರ್ಪು ಎಂದು ಮುಹಮ್ಮದ್ ಸಂತಸ ವ್ಯಕ್ತಪಡಿಸಿದರು.

1976-77ರಲ್ಲಿ ಅಯೋಧ್ಯೆಯ ರಾಮ್ ಜನ್ಮಭೂಮಿಯ ಮೊದಲ ಉತ್ಖನನವನ್ನು ಪ್ರೊಫೆಸರ್ ಬಿಬಿ ಲಾಲ್ ನೇತೃತ್ವದ ಎಎಸ್‍ಐ ತಂಡವು ನಡೆಸಿತ್ತು. ದೆಹಲಿಯ ಪುರಾತತ್ವ ಸಂಸ್ಥೆಯ ಹನ್ನೆರಡು ವಿದ್ಯಾರ್ಥಿಗಳು ತಂಡದ ಸದಸ್ಯರಾಗಿದ್ದರು. ಅದರಲ್ಲಿ ಕೆ.ಕೆ.ಮುಹಮ್ಮದ್ ಕೂಡ ಅವರಲ್ಲಿ ಒಬ್ಬರು. ಮುಹಮ್ಮದ್ ಅವರು ಡಿಸೆಂಬರ್ 15, 1990ರಂದು ಮೊದಲ ಬಾರಿಗೆ ಉತ್ಖನನದ ಸಮಯದಲ್ಲಿ ದೇವಾಲಯದ ಅವಶೇಷಗಳನ್ನು ನೋಡಿದ್ದೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *