ಸೋಮವಾರದಿಂದಲೇ ತಂಬಾಕು ಖರೀದಿ: ಹೆಚ್‌ಡಿಡಿ, ಹೆಚ್‌ಡಿಕೆಗೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಭರವಸೆ

3 Min Read

ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ (Piyush Goyal) ಅವರ ಜತೆ ಮಾತುಕತೆ ನಡೆಸಿದರು.

ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೇ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ಕುಮಾರಸ್ವಾಮಿ ತಿಳಿಸಿದರು. ಇದನ್ನೂ ಓದಿ: ಶಾಲಾ ಮಕ್ಕಳ ಆತ್ಮಹತ್ಯೆ ತಡೆಗೆ ನೀತಿ ಜಾರಿ – ಮಹದೇವಪ್ಪ

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೇ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಮೈಸೂರು-ಕೊಡಗು ಸಂಸದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಶಾಸಕರಾದ ಎ.ಮಂಜು, ಜಿ.ಡಿ.ಹರೀಶ್ ಗೌಡ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ಹಿರಿಯ ಮುಖಂಡ ಕೃಷ್ಣನಾಯಕ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಸೋಮವಾರದಿಂದ ತಂಬಾಕು ಖರೀದಿಗೆ ಸೂಚನೆ: ಸಾ.ರಾ.ಮಹೇಶ್
ಸಭೆ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಸೋಮವಾರದಿಂದ ತಂಬಾಕು ಖರೀದಿಗೆ ಸಚಿವ ಪಿಯೂಷ್ ಗೋಯಲ್ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

190 ದೇಶಗಳ ರಾಯಭಾರಿಗಳಿಗೆ ಪತ್ರ ಬರೆದು ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಕೋರಿಕೆ ಸಲ್ಲಿಸಲಾಗುವುದು. ಅಲ್ಲದೇ, ಈವರೆಗೆ ರಪ್ತು ಮಾಡದಿರುವ ದೇಶಗಳಿಗೂ ತಂಬಾಕು ರಪ್ತು ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಹಾಗೆಯೇ, ತಂಬಾಕಿಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಸಾ.ರಾ.ಮಹೇಶ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಬಿದ್ದಿಲ್ಲ ಯಾಕೆ – ಉತ್ತರ ನೀಡಿದ ಮಹದೇವಪ್ಪ

ಖರೀದಿ ನಿಲ್ಲಿಸಿರುವ ಪರಿಣಾಮದಿಂದ ತಂಬಾಕು ಬೆಲೆಯಲ್ಲಿ ಕುಸಿತ ಆಗಿದೆ. 320 ಯಿಂದ 250 ರೂ. ವರೆಗೂ ಕುಸಿತ ಕಂಡಿದೆ. ಈ ಹಿನ್ನೆಲೆ ಗೋಯಲ್ ಅವರನ್ನು ಭೇಟಿಯಾಗಿ ಬೆಲೆ ಹೆಚ್ಚಿಸುವ ಮತ್ತು ಪರಿಹಾರ ನೀಡುವ ಬಗ್ಗೆ ಮನವಿ ಮಾಡಲಾಗಿದೆ. ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ನೀಡಲು ಕೇಳಿದ್ದೇವೆ. ಅಲ್ಲದೇ, ತಂಬಾಕು ಮಂಡಳಿಯಲ್ಲಿ ಉತ್ತಮ ಮೂಲಸೌಕರ್ಯಗಳು ಅಗತ್ಯವಾಗಿದ್ದು, ಅದರ ಬಗ್ಗೆಯೂ ಕೇಂದ್ರ ಸಚಿವರ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ಶಾಸಕ ಎ.ಮಂಜು ಮಾತನಾಡಿ, ಕರ್ನಾಟಕದಲ್ಲಿ 100 ದಶಲಕ್ಷ ಟನ್ ತಂಬಾಕು ಬೆಳೆಯಲು ತಂಬಾಕು ಮಂಡಳಿ ಅವಕಾಶ ನೀಡಿದೆ. ಈ ವರ್ಷ 80 ದಶಲಕ್ಷ ಟನ್ ತಂಬಾಕು ಬೆಳೆಯಲಾಗಿದೆ. ನಾವು ಬೆಳೆದ ಸೊಪ್ಪನ್ನು ಸರ್ಕಾರ ನಿರ್ಧಾರ ಮಾಡಿದ ಬೆಲೆಯಲ್ಲಿ ಖರೀದಿ ಮಾಡಬೇಕಿದೆ. ಈ ಹಿಂದೆ ಖರೀದಿ ಭರವಸೆ ನೀಡಿದ ಕಂಪನಿಗಳು ಖರೀದಿ ಮಾಡಿಲ್ಲ. ಈಗ ಬೆಳೆದ ಸೊಪ್ಪನ್ನು ಕೂಡಲೇ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.

Share This Article