Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

Public TV
3 Min Read

– ದಾಳಿಕೋರರನ್ನ ಸದೆಬಡಿಯಲು ಹೆಚ್ಚುವರಿ ಸೈನಿಕರ ನಿಯೋಜನೆ

ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಸೇನಾ ಪಡೆಗಳ ಮುಖ್ಯಸ್ಥರ ಜೊತೆ ತುರ್ತು ಸಭೆ ನಡೆದಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಕೃತ್ಯ ಎಸಗಿದ ಉಗ್ರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಭಾರತವು ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ. ತೆರೆಮರೆಯಲ್ಲಿ ಪಿತೂರಿ ನಡೆಸಿದವರನ್ನೂ ಸಹ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತದ ಪ್ರತಿಯೊಬ್ಬ ನಾಗರಿಕನೂ ಈ ಹೇಡಿತನದ ಕೃತ್ಯದ ವಿರುದ್ಧ ಒಗ್ಗಟ್ಟಾಗಿದ್ದಾನೆ. ಹಾಗಾಗಿ ಇಂತಹ ಕೃತ್ಯಗಳಿಗೆ ಕಾರಣರಾದವರಿಗೆ ಸೂಕ್ತ ಉತ್ತರ ಕೊಡುತ್ತೇವೆ. ತೆರೆಮರೆಯಲ್ಲಿದ್ದುಕೊಂಡು ಪಿತೂರಿ ನಡೆಸಿದವರನ್ನೂ ನಾವು ಬಿಡೋದಿಲ್ಲ. ಭಾರತ ಸರ್ಕಾರ ಉಗ್ರರನ್ನು ಸದೆಬಡಿಯಲು ಅಗ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

ಭಾರತವು ಪ್ರಾಚೀನ ನಾಗರಿಕತೆ ಮತ್ತು ದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದೆ. ಇಂತಹ ಭಯೋತ್ಪಾದಕ ಚಟುವಟಿಕೆಗಳಿಂದ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಗೆ ಕಾರಣರಾದವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.

2 ಗಂಟೆಗೂ ಅಧಿಕ ಕಾಲ ಉನ್ನತಮಟ್ಟದ ಸಭೆ
ಭಯೋತ್ಪಾದಕ ದಾಳಿಯ ನಂತರ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಉನ್ನತಮಟ್ಟದ ಸಭೆಯಲ್ಲಿ ಎರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಕೆ ಸಿಂಗ್ ಭಾಗವಹಿಸಿದ್ದರು. ಸಭೆಯಲ್ಲಿ ಪಹಲ್ಗಾಂನಲ್ಲಾದ ಘಟನೆಯ ವಿವರಗಳನ್ನು ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದರು.

ಮಹತ್ವದ ವಿಷಯಗಳ ಕುರಿತು ಚರ್ಚೆ
ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ದಾಳಿಯ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಗೆ, ಭದ್ರತಾ ಸಮಿತಿಯ ಸಭೆಯು ಕೂಡ ನಡೆಯುವ ಸಾಧ್ಯತೆಯಿದೆ. ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ಕೃತ ಚರ್ಚೆಯನ್ನು ನಡೆಸಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಇನ್ನೂ ಅಜಿತ್ ದೋವಲ್ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಚೀಫ್ ಆಫ್ ಡಿಫೆನ್ಸ್ ಜನರಲ್ ಅನಿಲ್ ಚೌಹಾಣ್, ಭೂಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ದಿನೇಶ್ ತ್ರಿಪಾಠಿ, ವಾಯುಪಡೆಯ ಮುಖ್ಯಸ್ಥ ಎ.ಪಿ ಸಿಂಗ್ ಈ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು.

ಉನ್ನತ ಮಿಲಿಟರಿ ಅಧಿಕಾರಿಗಳು ಈಗಾಗಲೇ ದಾಳಿ ನಡೆದ ಪ್ರದೇಶದಲ್ಲಿ ಹಾಜರಿದ್ದಾರೆ. ದಾಳಿಕೋರರನ್ನು ಸದೆಬಡಿಯಲು ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಇದೊಂದು ಅತ್ಯಂತ ಹೇಡಿತನದ ಮತ್ತು ಖಂಡನೀಯ ಕೃತ್ಯ. ಮೃತ ಪಟ್ಟ ಕುಟುಂಬಕ್ಕೆ ಸಾಂತ್ವನಗಳು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Share This Article