ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಾರಾಮಾರಿ- ಐವರು ಬಿಜೆಪಿ ಶಾಸಕರು ಅಮಾನತು

By
2 Min Read

ಕೋಲ್ಕತ್ತಾ: ಬೀರ್‌ಭುಮ್‍ನ ಹಿಂಸಾಚಾರಕ್ಕೆ ಸಂಬಂಧಿಸಿ ಇಂದು ಪಶ್ಚಿಮಬಂಗಾಳದ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಶಾಸಕರ ನಡುವೆ ನಡೆದ ಮಾರಾಮಾರಿಯಲ್ಲಿ ಐವರು ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸೋಮವಾರ ಟಿಎಂಸಿ ಮತ್ತು ಬಿಜೆಪಿ ಶಾಸಕರ ನಡುವೆ ಬೀರ್‌ಭುಮ್‍ ಹಿಂಸಾಚಾರದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಬಿಜೆಪಿ ಶಾಸಕರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಚರ್ಚೆ ತಾರಕಕ್ಕೆ ಏರಿದ್ದು, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಮಾರಾಮಾರಿ ನಡೆದಿದೆ.

ಘಟನೆ ಬಳಿಕ ರಾಜ್ಯ ವಿಧಾನಸಭೆಯಲ್ಲಿ ಅಶಿಸ್ತಿನ ನಡೆತೆಗೆ ಬಿಜೆಪಿಯ ಐವರು ಶಾಸಕರನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿದ್ದಾರೆ. ಸುವೆಂದು ಅಧಿಕಾರಿ, ಮನೋಜ್ ತಿಗ್ಗಾ, ನರಹರಿ ಮಹತೋ, ಶಂಕರ್ ಘೋಷ್, ದೀಪಕ್ ಬರ್ಮನ್ ಅಮಾನತಾದ ಶಾಸಕರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯ ನಿರ್ದೇಶನಗಳನ್ನು ಸಿಬಿಐ ಅನುಸರಿಸಿದರೆ ಪ್ರತಿಭಟನೆ ಮಾಡ್ತೇವೆ: ಮಮತಾ ಬ್ಯಾನರ್ಜಿ

ಈ ಬಗ್ಗೆ ಬಿಜೆಪಿ ಮುಖಂಡ, ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ, ಬೀರ್‌ಭುಮ್‍ನಲ್ಲಿ ನಡೆದ ಹತ್ಯೆ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಇದರಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸಂಪೂರ್ಣ ಕೋಲಾಹಲವಾಗಿದೆ. ಮನೋಜ್ ತಿಗ್ಗಾ ಸೇರಿದಂತೆ ಬಿಜೆಪಿ ಶಾಸಕರ ಮೇಲೆ ಟಿಎಂಸಿ ಶಾಸಕರು ಹಲ್ಲೆ ನಡೆಸಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು ವಿಧಾನಸಭೆಯ ಸದನದಲ್ಲಿ ಎರಡು ಪಕ್ಷದ ಶಾಸಕರ ಗುಂಪು ಪರಸ್ಪರ ತಳ್ಳಿಕೊಂಡು ಕೂಗಿತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಘಟನೆಯೇನು?: ಬಗುಟಿ ಗ್ರಾಮ ಪಂಚಾಯ್ತಿ ಮುಖಂಡ ಭಾದು ಶೇಖ್ ಅವರ ಮೇಲೆ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಇದನ್ನೂ ಓದಿ: ವಕೀಲರ ಕಚೇರಿಗಳಿಗೂ ವಿದ್ಯುತ್ ಸಬ್ಸಿಡಿ – ಬಜೆಟ್‍ನಲ್ಲಿ ಆಪ್ ಘೋಷಣೆ

ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬೀರ್‌ಭುಮ್‍ ಎಸ್‍ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿತ್ತು. ಈ ನಡುವೆ ಜಿಲ್ಲೆಯ ಕೆಲ ಕುಟುಂಬಗಳು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *