ತಿರುಪತಿ ವಿಐಪಿ ದರ್ಶನ – 10 ಸಾವಿರ ದೇಣಿಗೆ ಕೊಟ್ರೆ ಸಿಗುತ್ತೆ ಟಿಕೆಟ್

Public TV
2 Min Read

ಹೈದರಾಬಾದ್: ತಿರುಪತಿ ತಿಮ್ಮಪ್ಪನ ವಿಐಪಿ ದರ್ಶನದ ಟಿಕೆಟ್ ಅನ್ನು ಈಗ ಯಾರೂ ಬೇಕಾದರೂ ಪಡೆಯಬಹುದು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ವಿಶೇಷ ವ್ಯವಸ್ಥೆ ಜಾರಿಗೆ ತಂದಿದ್ದು, 10 ಸಾವಿರ ರೂ. ದೇಣಿಗೆ ನೀಡಿದರೆ ನೇರವಾಗಿ ವೆಂಕಟೇಶ್ವರನ ದರ್ಶನವನ್ನು ಸುಲಭವಾಗಿ ಪಡೆಯಬಹುದಾಗಿದೆ.

10 ಸಾವಿರದಿಂದ 99,999ರವರೆಗೆ ಪಾವತಿಸಿ ವಿಶೇಷ ದರ್ಶನದ ಟಿಕೆಟ್ ಪಡೆದುಕೊಳ್ಳಬಹುದು. ಗರಿಷ್ಠ 9 ಟಿಕೆಟ್ ಪಡೆಯಲು ಅವಕಾಶ ಇದೆ. 99,999 ದೇಣಿಗೆ ಕೊಟ್ಟವರು 9 ಟಿಕೆಟ್ ಪಡೆಯಬಹುದು ಎಂದು ಟಿಟಿಡಿ ತಿಳಿಸಿದೆ. ಟಿಟಿಡಿ ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ ಟ್ರಸ್ಟ್ (ಶ್ರೀವಾಣಿ) ಆರಂಭಿಸಿದ್ದು, ಈ ಟ್ರಸ್ಟ್ ಮೂಲಕ ದೇಣಿಗೆ ಪಡೆದುಕೊಳ್ಳಲಾಗುವುದು ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದಾರೆ.

ಆಯಾ ತಿಂಗಳಿನ ಪ್ರತಿ ದಿನ ಎಷ್ಟು ಜನರಿಗೆ ವಿಐಪಿ ದರ್ಶನದ ಅವಕಾಶ ದೊರೆಯಲಿದೆ ಎಂಬುದನ್ನು ಒಂದು ತಿಂಗಳು ಮೊದಲೇ ಪ್ರಕಟಿಸಲಾಗುತ್ತದೆ. ಒಂದು ದಿನದಲ್ಲಿ ಎಷ್ಟು ಮಂದಿ ಭಕ್ತರಿಗೆ ಅವಕಾಶ ನೀಡಬೇಕು ಎನ್ನುವುದನ್ನು ಟ್ರಸ್ಟ್ ಕಾಲಕಾಲಕ್ಕೆ ನಿರ್ಧರಿಸಲಿದೆ. ಭಕ್ತರು ತಾವು ಭೇಟಿ ನೀಡುವ ದಿನವನ್ನು ಗಮನದಲ್ಲಿಟ್ಟುಕೊಂಡು ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನಗದು ರೂಪದಲ್ಲಿ ದೇಣಿಗೆ ಪಾವತಿಸಿ ಟಿಕೆಟ್ ಖರೀದಿಸಬಹುದಾಗಿದೆ.

ಗೋಕುಲಂ ರೆಸ್ಟ್ ಹೌಸ್‍ನಲ್ಲಿ ಶ್ರೀವಾಣಿ ಟ್ರಸ್ಟ್‍ಗೆ ದೇಣಿಗೆ ಪಡೆಯುವುದಕ್ಕೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ದೇಣಿಗೆ ನೀಡಿದ ತಕ್ಷಣವೇ ವಿಐಪಿ ದರ್ಶನದ ಟಿಕೆಟ್ ನೀಡಲಾಗುತ್ತದೆ. ಸೋಮವಾರದಿಂದಲೇ ಈ ವ್ಯವಸ್ಥೆ ಆರಂಭವಾಗಿದ್ದು ಚೆನ್ನೈನ ರಾಮಯ್ಯ ಎಂಬವರು 40 ಸಾವಿರ ರೂ. ಪಾವತಿಸಿ ಮೊದಲ ಅವಕಾಶ ಪಡೆದುಕೊಂಡಿದ್ದಾರೆ.

ನವೆಂಬರ್ 15 ರಂದು ಶ್ರೀವಾಣಿ ಟ್ರಸ್ಟ್ ಭಕ್ತರಿಂದ ದೇಣಿಗೆ ಪಡೆಯಲೆಂದು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಟ್ರಸ್ಟ್ ಮೂಲಕ ಸಂಗ್ರಹಿಸಲಾಗುವ ಹಣವನ್ನು ವಿವಿಧ ಸ್ಥಳಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ.

ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ದೇವಾಲಯ ನಿರ್ಮಿಸಲಾಗುತ್ತದೆ. ಮತಾಂತರ ತಡೆ ಮತ್ತು ಹಿಂದೂ ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರ ಮಾಡಲು ಈ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *