ಚಾಮರಾಜನಗರ: ವಿಶ್ವ ಪ್ರಸಿದ್ಧಿಯಾದ ತಿರುಪತಿ ಲಾಡುವಿನ ಮಾದರಿಯಲ್ಲೇ ಮಲೆ ಮಹದೇಶ್ವರ ಬೆಟ್ಟದಲ್ಲೂ ಲಾಡು ತಯಾರಿಸಲಾಗುತ್ತಿದೆ. ಪ್ರತಿವರ್ಷ ಮೂರು ಬಾರಿ ರಥೋತ್ಸವ ನಡೆಯುವ ಮಾದಪ್ಪನ ಬೆಟ್ಟದಲ್ಲಿ ಲಕ್ಷಗಟ್ಟಲೆ ಲಾಡು ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಸೋಮವಾರದಿಂದ ಶುರುವಾಗುವ ದೀಪಾವಳಿ ಜಾತ್ರೆಗೆ ಐದು ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಮಲೆಮಹೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ. ಲಕ್ಷಾಂತರ ಮಂದಿಯ ಆರಾಧ್ಯ ದೈವ ಮಲೆ ಮಹದೇಶ್ವರ ಅತಿ ಹೆಚ್ಚು ಆದಾಯ ಬರುವ ರಾಜ್ಯದ ಶ್ರೀಮಂತ ದೇವರುಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಇಲ್ಲಿನ ಹುಂಡಿಯಲ್ಲಿ ವಾರ್ಷಿಕ 25ರಿಂದ 30 ಕೋಟಿ ರೂಪಾಯಿ ಸಂಗ್ರಹವಾಗುತ್ತೆ. ಇನ್ನು ಚಿನ್ನದತೇರು ಎಳೆಯುವುದು, ವಿಶೇಷ ಪೂಜೆ, ಲಾಡು ಮಾರಾಟ, ಮುಡಿಸೇವೆ ಹೀಗೆ ಬೇರೆ ಬೇರೆ ರೀತಿಯಲ್ಲೂ ಕೋಟ್ಯಂತರ ರೂಪಾಯಿ ಆದಾಯವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಬರುತ್ತಾರೆ. ಹಬ್ಬಗಳು ರಜಾದಿನಗಳು ಅಮಾವಸ್ಯೆ ದೀಪಾವಳಿ, ಶಿವರಾತ್ರಿ, ಯುಗಾದಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಂತೂ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಲಾಡು ನೀಡಲಾಗುತ್ತೆ. ಈ ಬಾರಿ ದೀಪಾವಳಿಗೆಂದೇ ಐದು ಲಕ್ಷ ಲಾಡುಗಳನ್ನು ತಯಾರು ಮಾಡಲಾಗುತ್ತಿದೆ.
ದೇವಸ್ಥಾನದ 40 ಕ್ಕೂ ಹೆಚ್ಚು ಮಂದಿ ನೌಕರರು ಇಲ್ಲಿ ಲಾಡು ತಯಾರಿಸುತ್ತಾರೆ. ಸಕ್ಕರೆ, ಕಡ್ಲೆಹಿಟ್ಟು, ನಂದಿನಿತುಪ್ಪ, ಏಲಕ್ಕಿ ಪಚ್ಚಕರ್ಪೂರ ಕಲ್ಲುಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಹದವಾಗಿ ಮಿಶ್ರಣ ಮಾಡಿ ಲಾಡು ತಯಾರಿಸಲಾಗುತ್ತೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೇ ಲಾಡು ತಯಾರಿಕೆಗೆ ಬಳಸಲಾಗುತ್ತೆ. ಪ್ರತಿ ಲಾಡು ಒಂದೇ ಸಮನಾದ ಗಾತ್ರ ಹೊಂದಿದ್ದು, 100 ಗ್ರಾಮ ತೂಕವಿರುತ್ತೆ. ಲಾಡು ವಿತರಣೆಗೆಂದೇ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದ್ದು, 25 ರೂ.ಗೆ ಒಂದರಂತೆ ಭಕ್ತರಿಗೆ ಲಾಡು ಪ್ರಸಾದ ನೀಡಲಾಗುತ್ತೆ. ಶುಚಿ ರುಚಿಯಾಗಿರುವ ಈ ಲಾಡು ಪ್ರಸಾದಕ್ಕೆ ಭಾರಿ ಬೇಡಿಕೆ ಇದೆ. ಬೆಟ್ಟಕ್ಕೆ ಬರುವ ಪ್ರತಿಯೊಬ್ಬ ಭಕ್ತರು ತಮ್ಮ ಜೊತೆ ಈ ಲಾಡು ಪ್ರಸಾದ ಕೊಂಡೊಯ್ಯದೇ ಇರುವುದಿಲ್ಲ.
ತಿರುಪತಿ ಮಾದರಿಯಲ್ಲೇ ಇಲ್ಲಿ ಲಾಡು ತಯಾರಿಸಲಾಗುತ್ತೆ. ಹಾಗಾಗಿ, ಮಹದೇಶ್ವರ ಬೆಟ್ಟದ ಲಾಡು ತಿರುಪತಿ ಲಾಡುವಿನಷ್ಟೇ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೇ ಬಳಸುವುದರಿಂದ ಒಂದು ತಿಂಗಳ ಕಾಲ ಇಟ್ಟರೂ ಈ ಲಾಡು ಕೆಡುವುದಿಲ್ಲ. ವಾರ್ಷಿಕ 20 ಲಕ್ಷಕ್ಕೂ ಲಾಡುಗಳನ್ನು ಇಲ್ಲಿ ತಯಾರಿಸಲಾಗುತ್ತೆ. ಲಾಡು ತಯಾರಿಕೆಯಿಂದಲೇ ಮಾದಪ್ಪನ ಸನ್ನಿದಿಗೆ 20 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದು ಬರುತ್ತಿದೆ.