ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

By
1 Min Read

ಅಮರಾವತಿ: ತಿರುಪತಿ ತಿಮ್ಮಪ್ಪನ (Tirupati) ಬಜೆಟ್‌ 5,259 ಕೋಟಿಗೆ ಹೆಚ್ಚಳ ಕಂಡಿದೆ. 2025-26ರ ಆರ್ಥಿಕ ವರ್ಷಕ್ಕೆ 5,259 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (TTD) ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.

ಟಿಟಿಡಿ ಟ್ರಸ್ಟಿಗಳ ಮಂಡಳಿಗಳು ಬಜೆಟ್ ಅನ್ನು ಅನುಮೋದಿಸಿದೆ. ಜೊತೆಗೆ ‘ಪೋಟು’ (ದೇವಾಲಯದ ಅಡುಗೆಮನೆ) ಕೆಲಸಗಾರರಿಗೆ ವೇತನವನ್ನು ಹೆಚ್ಚಿಸುವುದು, ವೃದ್ಧರು ಮತ್ತು ಅಂಗವಿಕಲ ಭಕ್ತರಿಗೆ ಆಫ್‌ಲೈನ್ ದರ್ಶನ ನೀಡುವುದು ಸೇರಿದಂತೆ ಹಲವಾರು ಪ್ರಮುಖ ನಿರ್ಣಯಗಳನ್ನು ಮಂಡಳಿಯು ಅಂಗೀಕರಿಸಿದೆ.

‘ಪೋಟು’ ಕಾರ್ಮಿಕರಿಗೆ ಸಂಬಳ ಹೆಚ್ಚಿಸುವ ಮತ್ತು ಅವರ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಂಡಳಿ ನಿರ್ಧರಿಸಿತು. ಕೊಡಂಗಲ್, ಕರೀಂನಗರ, ಉಪಮಾಕ, ಅನಕಪಲ್ಲಿ, ಕರ್ನೂಲ್, ಧರ್ಮಾವರಂ, ತಲಕೋಣ, ಮತ್ತು ತಿರುಪತಿ (ಗಂಗಮ್ಮ ದೇವಸ್ಥಾನ) ದೇವಾಲಯಗಳ ಪುನರ್ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಮಂಡಳಿಯು ಅನುಮೋದನೆ ನೀಡಿದೆ.

ತಿರುಮಲದಲ್ಲಿ ಆಯ್ದ ವಿಐಪಿ ಮತ್ತು ವಿಐಪಿ ಅಲ್ಲದ ಅತಿಥಿ ಗೃಹಗಳನ್ನು ಪುನರ್ನಿರ್ಮಿಸಲು, ಅಲಿಪಿರಿಯಲ್ಲಿ ವಿಜ್ಞಾನ ನಗರ ಮತ್ತು ವಸ್ತುಸಂಗ್ರಹಾಲಯಕ್ಕಾಗಿ ಈ ಹಿಂದೆ ಗೊತ್ತುಪಡಿಸಿದ 20 ಎಕರೆ ಭೂಮಿಯ ಹಂಚಿಕೆಯನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ.

Share This Article