ತಿರುಪತಿ ಅನ್ನ ಪ್ರಸಾದಕ್ಕೆ ಮಸಾಲೆ ವಡೆ ಸೇರ್ಪಡೆ- ತಿಮ್ಮಪ್ಪನ ಭಕ್ತರಿಗೆ ದ.ಭಾರತದ ಖಾದ್ಯ

Public TV
1 Min Read

ಅಮರಾವತಿ: ತಿರುಪತಿಗೆ (Tirupati) ಬರುವ ಭಕ್ತರಿಗೆ ನೀಡುವ ಅನ್ನ ಪ್ರಸಾದದಲ್ಲಿ ಈ ಮತ್ತೊಂದು ಹೊಸ ಖಾದ್ಯ ಸೇರ್ಪಡೆಗೊಂಡಿದೆ. ಪ್ರಸಾದದ ಮೆನುವಿನಲ್ಲಿ ಮಸಾಲೆ ವಡೆ (Masala Vada) ಸೇರಿಸಲಾಗಿದೆ.

ಹೊಸ ಖಾದ್ಯವನ್ನು ಗುರುವಾರ ಬೆಳಗ್ಗೆ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಭಕ್ತರಿಗೆ ಅನ್ನ ಪ್ರಸಾದದಲ್ಲಿ ಮಸಾಲ ವಡೆಯನ್ನೂ ಬಡಿಸುವ ಮೂಲಕ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಚಾಲನೆ ಕೊಟ್ಟರು. ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್. ​​ವೆಂಕಯ್ಯ ಚೌಧರಿ ಉಪಸ್ಥಿತರಿದ್ದರು.

ಟಿಟಿಡಿ ಅಧ್ಯಕ್ಷ ನಾಯ್ಡು ಅವರು ಅಧಿಕಾರ ವಹಿಸಿಕೊಂಡಾಗ, ಅನ್ನ ಪ್ರಸಾದ ಮೆನುವಿನಲ್ಲಿ ದಕ್ಷಿಣ ಭಾರತದ ಖಾದ್ಯವನ್ನು ಸೇರಿಸುವ ಆಲೋಚನೆ ಇದೆ ಎಂದು ಹೇಳಿದ್ದರು. ನಾನು ಈ ಆಲೋಚನೆಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪ್ರಸ್ತಾಪಿಸಿದಾಗ, ಅವರು ತುಂಬಾ ಬೆಂಬಲ ನೀಡಿದರು. ತಕ್ಷಣವೇ ಯೋಜನೆಗೆ ಅನುಮೋದನೆ ನೀಡಿದರು. ನಮ್ಮ ಪ್ರಸಾದ ಅರ್ಪಣೆಯ ಭಾಗವಾಗಿ ಮಸಾಲೆ ವಡೆಯನ್ನು ಪರಿಚಯಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ದೇವಾಲಯವು ಭಕ್ತರಿಗೆ ಪೌಷ್ಟಿಕ, ರುಚಿಕರವಾದ ಮತ್ತು ವೈವಿಧ್ಯಮಯ ಆಹಾರ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಮಸಾಲ ವಡೆ ತಯಾರಿಸಲು ಬೇಳೆ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಪುದೀನ ಮತ್ತು ಸೋಂಪು ಪದಾರ್ಥಗಳನ್ನು ಬಳಸಲಾಗುತ್ತದೆ. ಇವುಗಳನ್ನು ಮಿಶ್ರಣ ಮಾಡಿ ರುಚಿಕರವಾಗಿ ವಡೆ ತಯಾರಿಸಲಾಗುತ್ತದೆ.

Share This Article