ಮೋದಿ ಇಂದು ದಣಿದಿದ್ದಾರೆ, ನಾಳೆ ನಿವೃತ್ತಿ ಆಗ್ತಾರೆ – ಜೈರಾಮ್‌ ರಮೇಶ್‌

Public TV
4 Min Read

ನವದೆಹಲಿ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ (PM Modi) ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನ ವಿಪಕ್ಷವಾದ ಕಾಂಗ್ರೆಸ್‌ ಟೀಕಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವನ್ನು ಸಮಾಧಾನಪಡಿಸಲು, ಮೋದಿ ಸ್ವಾತಂತ್ರ್ಯೋತ್ಸವದ ಭಾಷಣವನ್ನ ರಾಜಕೀಯಗೊಳಿಸಿದ್ದಾರೆ ಕಿಡಿ ಕಾರಿವೆ.

ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ (Jairam Ramesh) ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಮೋದಿ ಭಾಷಣವನ್ನ ಅರ್ಥಹೀನ, ಹಳಸಿದ, ನೀರಸ ಹಾಗೂ ಬೂಟಾಟಿಕೆ ಎಂದು ಕರೆದಿದ್ದಾರೆ. ಇದರೊಂದಿಗೆ ಎಸ್ಪಿ ನಾಯಕ ಅಖಿಲೇಶ್‌ ಯಾದವ್‌, ಅಸಾದುದ್ದೀನ್‌ ಓವೈಸಿ ಸೇರಿದಂತೆ ಹಲವರು ಮೋದಿ ಭಾಷಣ ಖಂಡಿಸಿದ್ದಾರೆ. ಇದನ್ನೂ ಓದಿ: ರೈತರ ಕಾವಲಿಗೆ ನಾನು ತಡೆ ಗೋಡೆಯಂತೆ ನಿಂತಿದ್ದೇನೆ – ಕೆಂಪು ಕೋಟೆಯಿಂದ ಟ್ರಂಪ್‌ಗೆ ಮೋದಿ ಖಡಕ್ ಸಂದೇಶ

ಆರ್‌ಎಸ್‌ಎಸ್‌ ಸಮಾಧಾನಪಡಿಸಲು ಕೆಂಪು ಕೋಟೆ ಭಾಷಣ
2024ರ ಲೋಕಸಭಾ ಫಲಿತಾಂಶಗಳ ನಂತರ ನಿರ್ಣಾಯಕವಾಗಿ ದುರ್ಬಲಗೊಂಡಿರುವ ಪ್ರಧಾನಿ ಮೋದಿ, ತಮ್ಮ ಅಧಿಕಾರಾವಧಿಯ ವಿಸ್ತರಣೆಗಾಗಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಮಾಧಾನಪಡಿಸಲು ಕೆಂಪು ಕೋಟೆ (Red Fort) ಭಾಷಣವನ್ನ ಬಳಸಿಕೊಂಡಿದ್ದಾರೆ. ಪ್ರಧಾನಿಯವರ ಇಂದಿನ ಭಾಷಣದ ಅತ್ಯಂತ ತೊಂದರೆದಾಯಕ ಅಂಶವೆಂದರೆ, ಕೆಂಪುಕೋಟೆಯಿಂದ ಆರ್‌ಎಸ್‌ಎಸ್‌ನ ಹೆಸರನ್ನು ಉಲ್ಲೇಖಿಸಿರುವುದಾಗಿದೆ. ಇದು ಸಾಂವಿಧಾನಿಕ, ಜಾತ್ಯತೀತ ಗಣರಾಜ್ಯದ ಚೈತನ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಂದಿನ ತಿಂಗಳು ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಆರ್‌ಎಸ್‌ಎಸ್‌ನ ಉಲ್ಲೇಖ ಅಧಿಕಾರದಲ್ಲಿ ಮುಂದುವರೆಯುವ ಹತಾಶ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ಸತತ 12ನೇ ಧ್ವಜಾರೋಹಣ, 103 ನಿಮಿಷ ಸುದೀರ್ಘ ಭಾಷಣ – ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ

ಅಲ್ಲದೇ ಚುನಾವಣಾ ಆಯೋಗದಂತಹ ನಮ್ಮ ಮೂಲಭೂತ ಸಾಂವಿಧಾನಿಕ ಸಂಸ್ಥೆಗಳ ಪತನಕ್ಕೆ ಪ್ರಧಾನಿಯೇ ಕಾರಣ ಮತ್ತು ಮಾಸ್ಟರ್ ಮೈಂಡ್ ಆಗಿದ್ದರೂ, ಏಕತೆ, ಸೇರ್ಪಡೆ ಮತ್ತು ಪ್ರಜಾಪ್ರಭುತ್ವದ ಕುರಿತು ಪ್ರಧಾನಿಯವರು ದೀರ್ಘ ಭಾಷಣ ಮಾಡಿದ್ದಾರೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಕುರಿತು ವಿರೋಧ ಪಕ್ಷದ ನಾಯಕರು ಎತ್ತಿದ ಮೂಲಭೂತ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಲಕ್ಷಾಂತರ ಮತದಾರರನ್ನು ಮತದಾನದಿಂದ ವಂಚಿತಗೊಳಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: 12 ಸ್ವಾತಂತ್ರ್ಯ ಸಂಭ್ರಮಗಳಲ್ಲಿ ಭಾಗಿ; 2014-2025ರ ವರೆಗೆ ಮೋದಿ ಪೇಟ, ವಿಭಿನ್ನ ಲುಕ್‌ ನೋಡಿ..

ಸ್ವಾತಂತ್ರ್ಯ ದಿನವು ಒಂದು ದೃಷ್ಟಿಕೋನ, ಪ್ರಾಮಾಣಿಕತೆ ಮತ್ತು ಸ್ಫೂರ್ತಿಯ ಕ್ಷಣವಾಗಿರಬೇಕು. ಆದರೆ ಇಂದಿನ ಭಾಷಣವು ಸ್ವ-ಪ್ರಶಂಸೆ ಮತ್ತು ಆಯ್ದ ಕಥೆಗಳ ಮಂದ ಮಿಶ್ರಣವಾಗಿತ್ತು. ದೇಶದ ಆಳವಾದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಬಿಕ್ಕಟ್ಟು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಯಾವುದೇ ಪ್ರಾಮಾಣಿಕ ಉಲ್ಲೇಖವಿರಲಿಲ್ಲ ಎಂದು ಟೀಕಿಸಿದರಲ್ಲದೇ ಕೊನೆಯಲ್ಲಿ ಪ್ರಧಾನಿ ಇಂದು ದಣಿದಂತೆ ಕಾಣುತ್ತಿದ್ದರು. ಅವರು ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Photo Gallery | ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ – ʻಆಪರೇಷನ್ ಸಿಂಧೂರʼ ಪ್ರತಿಬಿಂಬ

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಈ ಕುರಿತು ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ದಾರ್ಶನಿಕ ನಾಯಕರು ಬಲವಾದ ಭಾರತಕ್ಕೆ ಅಡಿಪಾಯ ಹಾಕಿದ್ದಾರೆ. ಆದರೆ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಯಾವುದೇ ಮಟ್ಟದ ಅನೈತಿಕತೆಗೆ ಇಳಿಯಲು ಸಿದ್ಧವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯು ಕಾಂಗ್ರೆಸ್ಸಿನ ಕಥೆಗೆ ಸಮಾನಾರ್ಥಕವಾಗಿದೆ. ಆದರೆ ಸ್ವಾತಂತ್ರ್ಯ ವೀರರು ದೇಶಕ್ಕಾಗಿ ಕಂಡ ಕನಸು ಈಗ ಮತ್ತಷ್ಟು ದೂರ ಸರಿಯುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಉಳಿಯಲು ಅನೈತಿಕ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು. ಇದನ್ನೂ ಓದಿ: ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಮೋದಿ ಭಾಷಣದಲ್ಲಿ ಹೇಳಿದ್ದೇನು?
ಇಂದು ನಾನು ಒಂದು ವಿಷಯವನ್ನು ಬಹಳ ಹೆಮ್ಮೆಯಿಂದ ಉಲ್ಲೇಖಿಸಲು ಬಯಸುತ್ತೇನೆ. 100 ವರ್ಷಗಳ ಹಿಂದೆ, ಒಂದು ಸಂಸ್ಥೆ ಹುಟ್ಟಿಕೊಂಡಿತು ರಾಷ್ಟ್ರೀಯ ಸ್ವಯಂಸೇವಕ ಸಂಘ. ರಾಷ್ಟ್ರಕ್ಕೆ 100 ವರ್ಷಗಳ ಸೇವೆ ಬಹಳ ಹೆಮ್ಮೆಯ ಸುವರ್ಣ ಪುಟವಾಗಿದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ, 100 ವರ್ಷಗಳ ಕಾಲ ತಾಯಿ ಭಾರತಿಯ ಕಲ್ಯಾಣದ ಗುರಿಯೊಂದಿಗೆ, ಲಕ್ಷಾಂತರ ಸ್ವಯಂಸೇವಕರು ಮಾತೃಭೂಮಿಯ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಸಾಟಿಯಿಲ್ಲದ ಶಿಸ್ತು ಇದರ ಗುರುತಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಶ್ವದ ಅತಿದೊಡ್ಡ ಎನ್‌ಜಿಒ (ಸರ್ಕಾರೇತರ ಸಂಸ್ಥೆ) ಆಗಿದೆ. 100 ವರ್ಷಗಳ ಸಮರ್ಪಣೆಯ ಇತಿಹಾಸವನ್ನ ಹೊಂದಿದೆ. ಇಂದು ಕೆಂಪು ಕೋಟೆಯಿಂದ, ರಾಷ್ಟ್ರ ಸೇವೆಗೆ 100 ವರ್ಷಗಳ ಕಾಲ ಕೊಡುಗೆ ನೀಡಿದ ಎಲ್ಲಾ ಸ್ವಯಂಸೇವಕರನ್ನು ನಾನು ಗೌರವಯುತವಾಗಿ ಸ್ಮರಿಸುತ್ತೇನೆ ಎಂದು ಹೇಳಿದ್ದರು.

Share This Article