ಟಿಪ್ಪು ಕಾಲದಲ್ಲಿರುತ್ತಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗ್ತಿದ್ರು- ಅಶೋಕ್

Public TV
2 Min Read

ಬೆಂಗಳೂರು: ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅವರನ್ನೂ ಮತಾಂತರ ಮಾಡುತ್ತಿದ್ದರು. ಈ ಮೂಲಕ ಸಿದ್ದರಾಮಯ್ಯ ಎಂಬ ಹೆಸರಿನ ಬದಲು ಅಬ್ದುಲ್ ಸಿದ್ದರಾಮಯ್ಯ ಆಗುತ್ತಿದ್ದರು ಎಂದು ಕಂದಾಯ ಸಚಿವ ಆರ್ ಅಶೋಕ್  ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ 1 ಲಕ್ಷ ಜನರನ್ನು ಮತಾಂತರ ಮಾಡಿದ್ದಾರೆ. ಹಾಗೆಯೇ ಮೇಲುಕೋಟೆಯಲ್ಲಿ ಈಗಲೂ ದೀಪಾವಳಿ ಆಚರಣೆ ಮಾಡಲ್ಲ. ಅಲ್ಲಿಯ ಜನರಿಗೆ ದೀಪಾವಳಿ ಕರಾಳ ದಿನವಾಗಿರುತ್ತದೆ. ಹಿಂದೂ ಅನ್ನೋದಕ್ಕೋಸ್ಕರ ಕೊಚ್ಚಿ ಚೆಂಡಾಡಿದ್ದಾರೆ. ಚಿತ್ರದುರ್ಗದಲ್ಲಿ ಒನಕೆ ಓಬವ್ವ ಇಂತಹ ನೂರಾರು ಹೆಸರುಗಳು ಇದೆ. ಅವರು ದೌರ್ಜನ್ಯ, ಅಕ್ರಮ ಎಸಗಿದ್ದಾರೆ ಎಂದರು.

ಬಹಳಷ್ಟು ಮಹಾಪುರುಷರ ಇತಿಹಾಸವನ್ನು ಪಠ್ಯದಲ್ಲಿ ತಂದೇ ಇಲ್ಲ. ಪಠ್ಯದಲ್ಲಿ ಬೇಡದೇ ಇರೋರು ಸೇರಿಕೊಂಡಿದ್ದಾರೆ. ಟಿಪ್ಪು ಒಬ್ಬ ಮತಾಂಧ, ಆಕ್ರಮಣಕಾರಿಯಾಗಿದ್ದವನು ಹಾಗೂ ಹಿಂದೂ ದ್ವೇಷಿ. ಹೀಗಾಗಿ ಅವನ ಕುರಿತು ಪಠ್ಯ ಅಗತ್ಯ ಇಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಟಿಪ್ಪು ಪಠ್ಯ ಕುರಿತು ಸಮಿತಿ ರಚನೆ ಆಗಿದೆ. ಸಮಿತಿ ವರದಿ ಕೊಟ್ಟ ಬಳಿಕ ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಠ್ಯದಲ್ಲಿ ಕಲಾಂ, ಶಿಶುನಾಳ ಶರೀಫ್, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ನಂತವರು ಬೇಕು. ಟಿಪ್ಪುವಿನಂತಹ ಮತಾಂಧರ ಬಗ್ಗೆ ನಮ್ಮ ಮಕ್ಕಳು ಕಲಿಯುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಇದೇ ವೇಳೆ ಮೆಡಿಕಲ್ ಕಾಲೇಜು ಜಟಾಪಟಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಮೆಡಿಕಲ್ ಕಾಲೇಜು ಕುರಿತು ವಾದ-ವಿವಾದ ಆಗಬಾರದಿತ್ತು. ಪ್ರತೀ ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಕೊಡುವ ಘೋಷಣೆಯನ್ನು ಮಾಡಿದ್ದೆವು. ನಂತರ ತಾಲೂಕು, ಹೋಬಳಿ ಕೇಂದ್ರಕ್ಕೆ ಕೊಡಬೇಕು. ಮೊದಲು ಜಿಲ್ಲೆಗೆ ಒಂದು ಕಾಲೇಜು ಕೊಡುವ ಪ್ರಕ್ರಿಯೆ ಮುಗಿಯಲಿ ಎಂದು ಹೇಳಿದರು.

ಮೆಡಿಕಲ್ ಕಾಲೇಜಿಗೆ ಬಿಜೆಪಿಯಿಂದ ದ್ವೇಷದ ರಾಜಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅಶೋಕ್, ದ್ವೇಷ ಮಾಡೋದು ಒಳ್ಳೆಯದಲ್ಲ. ದ್ವೇಷ ಮಾಡಿ ಕೋಟೆ ಕಟ್ಟಿದವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ದ್ವೇಷ ಮಾಡೋದು ನಮ್ಮ ಪದ್ಧತಿ ಅಲ್ಲ. ಕಾಲೇಜು ನ್ಯಾಯವಾಗಿ ಎಲ್ಲಿ ಸೇರಬೇಕೋ ಅಲ್ಲಿಗೆ ಸೇರುತ್ತದೆ. ಜಿಲ್ಲಾ ಕೇಂದ್ರಕ್ಕೆ ಸೇರುವುದು ನ್ಯಾಯಯುತ ಎಂದರು.

Share This Article
Leave a Comment

Leave a Reply

Your email address will not be published. Required fields are marked *