ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು – ಪ್ರತಾಪ್ ಸಿಂಹ

Public TV
1 Min Read

ಮೈಸೂರು: ನಮ್ಮ ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರ ಸ್ವಾಗತಾರ್ಹ ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳ ಪಠ್ಯಪುಸ್ತಕದಲ್ಲಿನ ಟಿಪ್ಪು ಪಠ್ಯ ತೆಗೆದುಹಾಕುವ ಕುರಿತ ಯಡಿಯೂರಪ್ಪನವರ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮದಕರಿ ನಾಯಕನನ್ನು ಮೋಸದಿಂದ ಕೊಂದ, ಯದುವಂಶದ ಆಡಳಿತ ಕಿತ್ತುಕೊಂಡ, ಒನಕೆ ಓಬವ್ವಳನ್ನು ಸಂಚು ಮಾಡಿ ಕೊಂದ. ಹೀಗೆ ಮೋಸದಿಂದ ವಿವಿಧ ರಾಜರುಗಳನ್ನು ಕೊಂದ ಅಪ್ಪ ಮಕ್ಕಳ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ಕಲಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿರುವ ಬಿಎಸ್‍ವೈ ಅವರಿಗೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕನ್ನಡವನ್ನು ಪ್ರೀತಿಸುವ ಎಲ್ಲರೂ ಈ ವಿಚಾರಕ್ಕೆ ಬೆಂಬಲ ಕೊಡುತ್ತಾರೆ ಎಂದರು.

ಟಿಪ್ಪು ವಿಚಾರದಲ್ಲಿ ವಿಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಿರಿಯರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮೈಸೂರು ಮಹಾರಾಜರು ಕಟ್ಟಿದ ಕಾಲೇಜಿನಲ್ಲಿ ಅವರು ಓದಿದ್ದಾರೆ. ಅವರು ಕಟ್ಟಿದ ಜಲಾಶಯದ ನೀರು ಕುಡಿದವರು. ಅದೆ ಮಹಾರಾಜರನ್ನು ನಾಶ ಮಾಡಿದ ಅಪ್ಪ ಮಕ್ಕಳ ಜಯಂತಿ ಆಚರಿಸುವ ನಿರ್ಧಾರ ಮಾಡುತ್ತಾರೆ. ಅಂತಹವರಿಂದ ಬೇರೆ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

ಬಚ್ಚೆಗೌಡ ಪುತ್ರನ ಟಿಪ್ಪು ಜಯಂತಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಸಂಸದನಾಗಿ ಮೈಸೂರು ಕೊಡಗು ಜನರ ಭಾವನೆಯನ್ನು ಹೇಳಿದ್ದೇನೆ ಅಷ್ಟೇ. ಬೇರೆಯವರ ಹೇಳಿಕೆ ಕುರಿತು ನನಗೆ ತಿಳಿದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *