ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಸಂಘಟನೆಗಳಿಗೆ ವಾರ್ನಿಂಗ್, 144 ಸೆಕ್ಷನ್ ಜಾರಿ

Public TV
2 Min Read

ಯಾದಗಿರಿ: ನಗರದ ಹತ್ತಿಕುಣಿ ಸರ್ಕಲ್ ಬಳಿ ಇರುವ ವಿವಾದಿತ ಟಿಪ್ಪು ಸರ್ಕಲ್ (Tippu Circle) ವಿವಾದ ತೀವ್ರ ಜಟಾಪಟಿಗೆ ಕಾರಣವಾಗಿದ್ದು, ಎರಡು ಕೋಮುಗಳ ನಡುವಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿದೆ. ಇಂದು ಶಿವಾಜಿ ಸಂಘಟನೆಯಿಂದ ಸರ್ಕಲ್ ತೆರವುಗೊಳಿಸೋದಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಘರ್ಷದ ಮುನ್ಸೂಚನೆ ಅರಿತ ಪೊಲೀಸರು ತೀವ್ರ ನಿಗಾವಹಿಸಿದ್ದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಯಾದಗಿರಿ ನಗರದಲ್ಲೀಗ ಟಿಪ್ಪು ಸರ್ಕಲ್ ವಿವಾದ ಶುರುವಾಗಿದ್ದು, ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ನಗರದ ಹತ್ತಿಕುಣಿ ರಸ್ತೆ ಬಳಿ 2010ರಲ್ಲಿ ನಿರ್ಮಾಣವಾಗಿರುವ ಟಿಪ್ಪು ಸರ್ಕಲ್ ಅನಧಿಕೃತವಾಗಿದೆ ಅಂತಾ ಜೈ ಶಿವಾಜಿ ಸಂಘಟನೆ ಆರೋಪಿಸಿದೆ. ಅನಧಿಕೃತವಾಗಿ ನಿರ್ಮಾಣ ಮಾಡಿರೋ ವೃತ್ತದಲ್ಲಿ ಹಾಕಿರುವ ನಾಮಫಲಕವನ್ನ ತೆರವುಗೊಳಿಸಬೇಕು ಅಂತಾ ಒತ್ತಾಯಿಸಿ, ಗಡುವನ್ನೂ ನೀಡಲಾಗಿತ್ತು. ಆ ಗಡುವು ಮುಕ್ತಾಯವಾಗಿದ್ದು, ಪ್ರತಿಭಟನಾ ಮೆರವಣಿಗೆ ಟಿಪ್ಪು ಸರ್ಕಲ್ ಗೆ ಬಂದು ನಾವೇ ನಾಮಫಲಕ ಕಿತ್ತೊಗಿತೀವಿ ಅಂತಾ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ. ಹೀಗಾಗಿ ಟಿಪ್ಪು ಸರ್ಕಲ್ ಬಳಿ ಇರೋ ಏರಿಯಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: BMTC ಬಸ್‍ನಿಂದ ಬರೋಬ್ಬರಿ 167 ಲೀಟರ್ ಡೀಸೆಲ್ ಕಳ್ಳತನ!

ಪ್ರತಿಭಟನೆ ಮೂಲಕ ನಾವೇ ಸರ್ಕಲ್ ಕಿತ್ತು ಹಾಕ್ತೀವಿ ಎಂದಿದ್ದ ಶಿವಾಜಿ ಸಂಘಟನೆ ಅಧ್ಯಕ್ಷ ಪರಶುರಾಮ್ ಶೇಗೂರಕರ್ ಹೇಳಿಕೆಗೆ ಟಿಪ್ಪು ಸಂಘಟನೆ ಮುಖಂಡರು ಕೆಂಡಕಾರಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಲ್ ತೆರವು ಮಾಡೋದಕ್ಕೆ ಬಿಡೋದಿಲ್ಲ ಅಂತಾ ಟಿಪ್ಪು ಸಂಘಟನೆಯಿಂದ ಪ್ರತಿ ಸವಾಲ್ ಹಾಕಲಾಗಿದ್ದು, ಸಾವು ನೋವಾದ್ರೆ ನಾವು ಕಾರಣ ಅಲ್ಲ ಅಂತಾ ಎರಡೂ ಸಂಘಟನೆಯವ್ರು ಹೇಳಿಕೆ ಕೊಟ್ಟಿದ್ದಾರೆ. ಈಗಾಗಲೇ ಎರಡೂ ಸಂಘಟನೆಯ ಮುಖಂಡರನ್ನ ಕರೆಸಿ ವಾರ್ನ್ ಮಾಡಿರೋ ಪೊಲೀಸರು ಟಿಪ್ಪು ಸರ್ಕಲ್ ಏರಿಯಾದಲ್ಲಿ 144 ಸೆಕ್ಷನ್ ಜಾರಿ (144 Section) ಮಾಡಿದ್ದಾರೆ. ಯಾವುದೇ ಹೋರಾಟಕ್ಕೂ ಪ್ರತಿಭಟನೆಗೆ ಅವಕಾಶ ಇಲ್ಲ ಅಂತಾ ಪ್ರತಿಭಟನೆ ಮಾಡಲು ನಿರ್ಧರಿಸಿದ್ದವ್ರಿಗೆ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಟಿಪ್ಪು ಸರ್ಕಲ್ ಬಳಿ ಡಿಆರ್ ವ್ಯಾನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಸದ್ಯ ವಿವಾದಿತ ಟಿಪ್ಪು ಸರ್ಕಲ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಿರೋದ್ರಿಂದ, ಪ್ರತಿಭಟನೆಗೆ ಅವಕಾಶ ಇಲ್ಲ ಅನ್ನೋದನ್ನ ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಹಠಕ್ಕೆ ಬಿದ್ದಿರೋ ಹೋರಾಟಗಾರರು ಸರ್ಕಲ್ ತೆರವುಗೊಳಿಸೋತನಕ ಹೋರಾಟ ಕೈ ಬಿಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದು, ಏನಾಗುತ್ತೋ ಅನ್ನೋ ಆತಂಕ ಯಾದಗಿರಿ ಜನರಲ್ಲಿ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *