ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

Public TV
2 Min Read

ಬೆಂಗಳೂರು: ಶ್ರೀಲಂಕಾದ ಏಂಜಲೋ ಮಾಥ್ಯೂಸ್ (Angelo Mathews) ಮತ್ತು ಬಾಂಗ್ಲಾದೇಶ ಶಕಿಬ್ ಉಲ್ ಹಸನ್ (Shakib Al Hasan) ಕಿತ್ತಾಟದ ಮಧ್ಯೆ ವೀರೇಂದ್ರ ಸೆಹ್ವಾಗ್ ಸುದ್ದಿಯಾಗುತ್ತಿದ್ದಾರೆ.

ದೆಹಲಿಯಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಏಂಜಲೋ ಮಾಥ್ಯೂಸ್ ಒಂದು ಎಸೆತ ಎದುರಿಸದೇ ಟೈಮ್ಡ್ ಔಟ್‌ಗೆ (timed out) ಬಲಿಯಾಗಿದ್ದರು. ಈ ಮೂಲಕ ಟೈಮ್ಡ್ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

ಟೈಮ್ಡ್ ಔಟ್ ಮನವಿ ಮಾಡಿದ್ದಕ್ಕೆ ಶಕಿಬ್ ಉಲ್ ಹಸನ್ ಸೇರಿದಂತೆ ಬಾಂಗ್ಲಾ (Bangladesh) ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಹಲವು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ (Team India) ಅಭಿಮಾನಿಗಳು 2010 ಪಂದ್ಯದಲ್ಲಿ ಸೆಹ್ವಾಗ್ (Virender sehwag) ಅವರ ಉದಾಹರಣೆ ನೀಡಿ ಶ್ರೀಲಂಕಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.

2010ರಲ್ಲಿ ಏನಾಗಿತ್ತು?
ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 170 ರನ್‌ಗಳಿಗೆ ಆಲೌಟ್ ಆಗಿತ್ತು.  ಇದನ್ನೂ ಓದಿ: ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 34 ಓವರ್‌ಗಳಲ್ಲಿ 166 ರನ್‌ಗಳಿಸಿತ್ತು. ಸೆಹ್ವಾಗ್ 99 ರನ್‌ಗಳಿಸಿದ್ದರೆ ಧೋನಿ 23 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಗೆಲುವಿಗೆ ಕೇವಲ 5 ರನ್ ಬೇಕಿತ್ತು.

ರಂದೀವ್ 35ನೇ ಓವರ್ ಎಸೆಯಲು ಬಂದಾಗ ಸೆಹ್ವಾಗ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನು ಸೆಹ್ವಾಗ್ ಬ್ಯಾಟಿನಿಂದ ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟಿಗೆ ಸಿಗಲಿಲ್ಲ. ಈ ಚೆಂಡನ್ನು ನಾಯಕನಾಗಿದ್ದ ಕುಮಾರ ಸಂಗಕ್ಕಾರ ಸಹ ಹಿಡಿಯದ ಕಾರಣ ಬೌಂಡರಿಗೆ ಹೋಗಿತ್ತು. ಬೈ ಮೂಲಕ ಇತರೇ 4 ರನ್ ಸೇರ್ಪಡೆಯಾದ ಕಾರಣ ಸ್ಕೋರ್ ಸಮವಾಗಿತ್ತು. ಹೀಗಿದ್ದರೂ ಸೆಹ್ವಾಗ್ 1 ರನ್ ಗಳಿಸಿ ಶತಕ ಹೊಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 4ನೇ ಎಸೆತವನ್ನು ಸೆಹ್ವಾಗ್ ಲಾಂಗ್ ಅಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದ್ದರು.

ಸೆಹ್ವಾಗ್ ಸಿಕ್ಸ್ ಸಿಡಿಸಿದ್ದರೂ ಶತಕ ಪೂರ್ಣಗೊಂಡಿರಲಿಲ್ಲ. ಯಾಕೆಂದರೆ ರಂದೀವ್ ನೋಬಾಲ್ ಎಸೆದಿದ್ದರು. ನೋಬಾಲ್‌ನಲ್ಲಿ ಗೇಮ್ ಕೊನೆಯಾದರೆ ಕೇವಲ ಒಂದು ರನ್ ಸಿಗುತ್ತದೆ ಹೊರತು ಬ್ಯಾಟರ್ ಖಾತೆಗೆ ಆ ರನ್ ಸೇರ್ಪಡೆಯಾಗುವುದಿಲ್ಲ. ಐಸಿಸಿಯ ಈ ನಿಯಮದಿಂದಾಗಿ ಸೆಹ್ವಾಗ್ ಶತಕ ಪೂರ್ಣಗೊಂಡಿರಲಿಲ್ಲ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಪ್ರತಿಕ್ರಿಯಿಸಿದ ಸೆಹ್ವಾಗ್, ಒಬ್ಬ ಬ್ಯಾಟ್ಸ್‌ಮನ್‌ 99 ರನ್‌ ಗಳಿಸಿದ್ದಾಗ ಮತ್ತು ಸ್ಕೋರ್‌ಗಳು ಸಮವಾಗಿದ್ದಾಗ ಬೌಲರ್‌ಗಳು ನೋ-ಬಾಲ್‌ಗಳು ಮತ್ತು ವೈಡ್‌ಗಳನ್ನು ಎಸೆಯುವುದು ಸಾಮಾನ್ಯ ಎಂದು ಹೇಳಿ ಲಂಕಾ ತಂಡದ ಕ್ರೀಡಾ ಸ್ಫೂರ್ತಿಯ ಬಗ್ಗೆ ಮಾತನಾಡಿದ್ದರು.

 

ಈ ವಿಚಾರವನ್ನು ಮುಂದಿಟ್ಟುಕೊಂಡು ಟೀಂ ಇಂಡಿಯಾ ಅಭಿಮಾನಿಗಳು ಈಗ ಶ್ರೀಲಂಕಾ ತಂಡವನ್ನು ಪ್ರಶ್ನಿಸುತ್ತಿದ್ದಾರೆ. ಈಗ ನೀವು ಬಾಂಗ್ಲಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ಅಂದು ಕುಮಾರ ಸಂಗಕ್ಕಾರ ಹಿಡಿಯಬಹುದಾದ ಚೆಂಡನ್ನು ಹಿಡಿಯದ ಕಾರಣ ಅದು ಬೌಂಡರಿಗೆ ಹೋಗಿತ್ತು. ಕೊನೆಗೆ ರಂದೀವ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದು ಸೆಹ್ವಾಗ್ ಶತಕವನ್ನು ತಡೆದಿದದ್ದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Share This Article