ಆರ್‌ಸಿಬಿ ಬ್ಯಾಟರ್‌ಗಳ ಆರ್ಭಟಕ್ಕೆ ಸಿಎಸ್‌ಕೆ ಸುಸ್ತು – 106 ಮೀಟರ್‌ ಸಿಕ್ಸರ್‌ ಬಾರಿಸಿ ಬೈಬೈ ಹೇಳಿದ ಡೇವಿಡ್‌

3 Min Read

– ಸಿಕ್ಸರ್‌, ಬೌಂಡರಿಗಳಿಂದಲೇ 178 ರನ್‌ ಚಚ್ಚಿದ ಬೆಂಗಳೂರು ಬಾಯ್ಸ್‌

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್‌ ಸಂಡೇ ನಡೆದ ಐಪಿಎಲ್ 2026 (IPL 2026) ರ ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗಳನ್ನ ಕಳೆದುಕೊಂಡು 250 ರನ್ ಕಲೆಹಾಕಿತು. ಈ ಮೂಲಕ ಸಿಎಸ್‌ಕೆ ವಿರುದ್ಧ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಬಾರಿಸಿದ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಯಿತು. ಜೊತೆಗೆ 36 ಬಾರಿ 200+ ಮೊತ್ತ ಗಳಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ದಾಖಲೆಯನ್ನ ಸರಿಗಟ್ಟಿತು. ಇದನ್ನೂ ಓದಿ: ತವರಲ್ಲಿ ಅಬ್ಬರಿಸಿ ಬೊಬ್ಬಿರಿದ RCB – ಚೆನ್ನೈ ವಿರುದ್ಧ 43 ರನ್‌ಗಳ ಭರ್ಜರಿ ಜಯ – ಪಾಯಿಂಟ್‌ ಪಟ್ಟಿಯಲ್ಲಿ ನಂ.1

ಆರ್​ಸಿಬಿ ಉತ್ತಮ ಆರಂಭ
ಬ್ಯಾಟಿಂಗ್‌ ಆರಂಭಿಸಿದ ಆರ್​ಸಿಬಿಗೆ ಅಬ್ಬರದ ಆರಂಭ ಸಿಗಲಿಲ್ಲ. ಮೊದಲ 3 ಓವರ್​ಗಳಲ್ಲಿ ತಂಡ ಯಾವುದೇ ಬೌಂಡರಿ ಕಲೆಹಾಕಲಿಲ್ಲ. ಆದಾಗ್ಯೂ ಉತ್ತಮ ಅಡಿಪಾಯ ಹಾಕುವಲ್ಲಿ ಕೊಹ್ಲಿ ಹಾಗೂ ಸಾಲ್ಟ್ ಯಶಸ್ವಿಯಾದರು. ಕೊಹ್ಲಿ 28 ರನ್ ಗಳಿಸಿ ಔಟಾದರೆ, ಸಾಲ್ಟ್ ಹಾಗೂ ಪಡಿಕ್ಕಲ್ ಅರ್ಧಶತಕದ ಜೊತೆಯಾಟ ಕಟ್ಟಿದರು. ಸಾಲ್ಟ್ 30 ಎಸೆತಗಳಲ್ಲಿ 46 ರನ್ ಬಾರಿಸಿ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ಎದುರಾಳಿ ತಂಡದ ವಿರುದ್ಧ ತನ್ನದೇ ದಾಖಲೆ ಉಡೀಸ್‌ ಮಾಡಿದ ಕೊಹ್ಲಿ

ಸಿಕ್ಸರ್‌, ಬೌಂಡರಿಗಳಿಂದಲೇ 178 ರನ್‌
ಪವರ್‌ ಪ್ಲೇ ನಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡದಿದ್ದರೂ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಆರ್‌ಸಿಬಿ ತಂಡ ಯಶಸ್ವಿಯಾಗಿತ್ತು. ಆ ಬಳಿಕ ಫಿಲ್‌ ಸಾಲ್ಟ್‌, ಪಡಿಕ್ಕಲ್‌, ಪಾಟಿದಾರ್‌ ಹಾಗೂ ಟಿಮ್‌ ಡೇವಿಡ್‌ ಆಕ್ರಮಣ ಬ್ಯಾಟಿಂಗ್‌ಗೆ ಮುಂದಾದರು. ಆರ್‌ಸಿಬಿ ಬ್ಯಾಟರ್‌ಗಳ ಅಬ್ಬರಕ್ಕೆ ಸಿಎಸ್‌ಕೆ ಬೌಲರ್‌ಗಳು ಹೈರಾಣಾದರು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಒಟ್ಟು 19 ಸಿಕ್ಸರ್‌, 14 ಬೌಂಡರಿಗಳು ಸಿಡಿದವು, ಬೌಂಡರಿಗಳಿಂದಲೇ ಆರ್‌ಸಿಬಿ 178 ರನ್‌ ಕಲೆಹಾಕಿತ್ತು ಅನ್ನೋದು ಮತ್ತೊಂದು ವಿಶೇಷ. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್‌, ಕೊನೆಯ ಓವರ್‌ನಲ್ಲಿ ಪಂತ್‌ 3 ಬೌಂಡರಿ – ಲಕ್ನೋಗೆ ರೋಚಕ ಜಯ

ಪಡಿಕ್ಕಲ್ ಅರ್ಧಶತಕ
ಸಾಲ್ಟ್ ಬಳಿಕ ಬಂದ ನಾಯಕ ರಜತ್ ಪಾಟಿದರ್ ಕೂಡ ಬರಿ ಸಿಕ್ಸರ್​ಗಳಲ್ಲೇ ಆಟ ಮುಂದುವರೆಸಿದರು. ಇದರ ಲಾಭ ಪಡೆದ ಪಡಿಕ್ಕಲ್ ಈ ಆವೃತ್ತಿಯಲ್ಲಿ ಸತತ 2ನೇ ಅರ್ಧಶತಕ ಪೂರೈಸಿದರು. ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಬಾರಿಸಿ ಔಟಾದರು. ಹಾಗೆಯೇ ಪಾಟಿದರ್ ಜೊತೆಗೂಡಿ ಅರ್ಧಶತಕದ ಜೊತೆಯಾಟ ಕಟ್ಟಿ ತಂಡವನ್ನ 150 ರನ್​ಗಳ ಗಡಿ ದಾಟಿಸಿದರು.

ಡೇವಿಡ್ ಸ್ಫೋಟಕ ಬ್ಯಾಟಿಂಗ್
ರಜತ್ ವಿಕೆಟ್ ಬಳಿಕ ಬಂದ ಟಿಮ್ ಡೇವಿಡ್ ಪಂದ್ಯದ ದಿಕ್ಕನೇ ಬದಲಿಸಿದರು. ಆರ್​ಸಿಬಿಯ ಸ್ಕೋರ್ ಬೋರ್ಡ್​ ವೇಗವನ್ನ ಹೆಚ್ಚಿಸಿದ ಟಿಮ್ ಡೇವಿಡ್ ಕೇವಲ 21 ಎಸೆತಗಳಲ್ಲಿ 6 ಸಿಕ್ಸರ್ ಸಹಿತ ಅರ್ಧಶತಕ ಬಾರಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇತ್ತ ನಾಯಕ ರಜತ್ ಪಾಟಿದರ್ ಕೂಡ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 48 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಜೋಡಿ ಕೊನೆಯ 5 ಓವರ್​​ಗಳಲ್ಲಿ ಬರೋಬ್ಬರಿ 97 ರನ್ ಕಲೆಹಾಕಿದ್ದು, ಇವರಿಬ್ಬರ ಸ್ಫೋಟಕ ಬ್ಯಾಟಿಂಗ್​ಗೆ ಹಿಡಿದ ಕೈಗನ್ನಡಿಯಾಗಿತ್ತು.

106 ಮೀಟರ್‌ ಸಿಕ್ಸರ್‌ 
ಇನ್ನೂ ಜೇಮಿ ಓವರ್ಟನ್‌ 19ನೇ ಓವರ್‌ನಲ್ಲಿ ಬರೋಬ್ಬರಿ 30 ರನ್‌ ಚಚ್ಚಿದ ಟಿಮ್‌ ಡೇವಿಡ್‌ 19ನೇ ಓವರ್‌ನ ಕೊನೇ ಎಸೆತದಲ್ಲಿ 106 ಮೀಟರ್‌ ಸಿಕ್ಸರ್‌ ಸಿಡಿಸಿದರು. ಡೇವಿಡ್‌ ಹೊಡೆತಕ್ಕೆ ಬಾಲು ಸ್ಟೇಡಿಯಂನಿಂದ ಆಚೆಗೆ ಹಾರಿತು. ಇಂತಹ ಅದ್ಭುತ ಶಾಟ್‌ ಎಂಜಾಯ್‌ ಮಾಡಿದ ಡೇವಿಡ್‌ ಬಾಲ್‌ ಸ್ಟೇಡಿಯಂನಿಂದಾಚೆ ಹೋಗ್ತಿದ್ದಂತೆ ಬೈಬೈ ಹೇಳಿದ್ರು. ಇದು ಅಭಿಮಾನಿಗಳಿಗೆ ಮತ್ತಷ್ಟು ಕಿಕ್‌ ಕೊಟ್ಟಿತು.

Share This Article