ʻಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆʼ ರದ್ದು – ಸಂಪುಟ ನಿರ್ಧಾರಕ್ಕೆ ಕಾಂಗ್ರೆಸ್‌ ಆಕ್ಷೇಪ; ಸಭಾತ್ಯಾಗ

Public TV
2 Min Read

– ಬಾಲ್ಯ ವಿವಾಹ ತಡೆಯೋ ನಿಟ್ಟಿನಲ್ಲಿ ಕಾಯ್ದೆ ರದ್ದು ಎಂದು ಅಸ್ಸಾಂ ಸಿಎಂ ಸ್ಪಷ್ಟನೆ
– ನಾನು ಬದುಕಿರುವವರೆಗೂ ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ – ಹಿಮಂತ ಬಿಸ್ವಾ ಶರ್ಮಾ

ದಿಸ್ಪುರ: ಉತ್ತರಾಖಂಡ (Uttarakhand) ಸರ್ಕಾರ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೊಳಿಸಿದ ಬೆನ್ನಲ್ಲೇ ಅಸ್ಸಾಂ (Assam) ಕ್ಯಾಬಿನೆಟ್ ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ 1935’ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ವಿಚಾರವಾಗಿ ಸದನದಲ್ಲಿಂದು ಚರ್ಚೆ ನಡೆಯಿತು. ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಐಯುಡಿಎಫ್ ತೀವ್ರವಾಗಿ ಖಂಡಿಸಿ, ಸಭಾತ್ಯಾಗ ಮಾಡಿದವು.

ಸೋಮವಾರ ಅಸ್ಸಾಂ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ವ್ಯಾಪಕ ಟೀಕೆಯ ನಂತರ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕಾಯ್ದೆ ರದ್ದುಪಡಿಸಿದ್ದಕ್ಕೆ ಸ್ಪಷ್ಟನೆ ನೀಡಿದರು. ಬಾಲ್ಯವಿವಾಹ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ‌ʻಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆʼಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ನಾನು ಬದುಕಿರುವವರೆಗೂ ಅಸ್ಸಾಂನಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ದಿಟ್ಟ ಉತ್ತರ ನೀಡಿದರು. ಇದನ್ನೂ ಓದಿ: ಹಿಂದೂಗಳಿಗೆ ಮತ್ತೆ ಜಯ- ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಈ ನಡುವೆಯೂ ಸರ್ಕಾರದ ನಿರ್ಧಾರ ಖಂಡಿಸಿದ ಕಾಂಗ್ರೆಸ್‌, ಮೂಲ ಮಸೂದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸದೇ ತಿದ್ದುಪಡಿಗಳನ್ನು ಮಾಡಬಹುದಿತ್ತು ಎಂದು ಆಗ್ರಹಿಸಿತು. ನಂತರ ಸರ್ಕಾರದ ನಿರ್ಧಾರ ವಿರೋಧಿಸಿ ಸಭಾತ್ಯಾಗ ಮಾಡಿತು. ಎಐಯುಡಿಎಫ್ ಶಾಸಕರೂ ಸಹ ಅಸ್ಸಾಂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದ್ಯಾವುದನ್ನೂ ಪರಿಗಣಿಸದೇ ಸ್ಪಿಕರ್‌ ಸದನದ ಪಟ್ಟಿಮಾಡಿದ ವ್ಯವಹಾರವನ್ನು ಮುಂದುವರಿಸಿದ್ದರಿಂದ ಎಐಯುಡಿಎಫ್‌ ಶಾಸಕರೂ ಸಭಾತ್ಯಾಗ ಮಾಡಿದರು. ವಿರೋಧ ಪಕ್ಷದ ಸಿಪಿಐ(ಎಂ) ಶಾಸಕ ಮತ್ತು ಏಕೈಕ ಪಕ್ಷೇತರ ಶಾಸಕರು ಸದನದಲ್ಲಿ ಇದ್ದರು. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್‌ಗೆ ಶಾಕ್- ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ಕಳೆದ ಶುಕ್ರವಾರ ಅಸ್ಸಾಂ ಸಂಪುಟ ಅಸ್ಸಾಂ ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ – 1935’ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ಈಗ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿಯೇ ಬರುತ್ತವೆ. ಇದು ಯುಸಿಸಿ ಸಾಧಿಸುವತ್ತ ಒಂದು ಹೆಜ್ಜೆ ಎಂದು ಸಂಪುಟ ಸಚಿವರು ಬಣ್ಣಿಸಿದ್ದರು. ಇದನ್ನೂ ಓದಿ: ಯುಪಿಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ; ಅಖಿಲೇಶ್‌ ಯಾದವ್‌ ಜೊತೆ ರಾಹುಲ್‌ ಗಾಂಧಿ ಸೆಲ್ಫಿ

Share This Article