ಮುಳ್ಳಿನ ದೇವಾಲಯ ನಿರ್ಮಿಸಿ ಅದ್ಧೂರಿ ಜಾತ್ರಾಮಹೋತ್ಸವ

Public TV
1 Min Read

ಚಿತ್ರದುರ್ಗ: ತಂತ್ರಜ್ಞಾನ ಎಷ್ಟೇ ಮುಂದುವರಿದ್ದರೂ ಜನರಿಗೆ ದೇವರ ಮೇಲಿನ ಭಕ್ತಿ ಮಾತ್ರ ಕಡಿಮೆಯಾಗಿಲ್ಲ. ಮುಳ್ಳಿನಿಂದ ದೇಗುಲ ನಿರ್ಮಿಸಿ ಅದರಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಜಾತ್ರೆ ಮಾಡುವ ಸಂಪ್ರದಾಯ ಇನ್ನೂ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿಯಲ್ಲಿ ಜೀವಂತವಾಗಿದೆ.

ಬುಡಕಟ್ಟು ಸಂಸ್ಕೃತಿಯ ತೊಟ್ಟಿಲು ಎನಿಸಿರೋ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ಅನೇಕ ವಿಶಿಷ್ಠ ಆಚರಣೆಗಳು ಜಾರಿಯಲ್ಲಿವೆ. ಇದಕ್ಕೆ ಸಾಕ್ಷಿ ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿಯಲ್ಲಿ ನಡೆಯೊ ಮುಳ್ಳಿನ ಜಾತ್ರೆ. ಪ್ರತಿವರ್ಷ ಶೂನ್ಯ ಮಾಸದಲ್ಲಿ ‘ವಸಲುದಿಬ್ಬ’ ಎಂಬ ಪ್ರದೇಶದಲ್ಲಿ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಕ್ಯಾತಪ್ಪ ದೇವರ ವಿಭಿನ್ನ ಜಾತ್ರೆಯನ್ನು ಇಲ್ಲಿ ಆಚರಿಸಲಾಗುತ್ತದೆ. ಇದಕ್ಕಾಗಿ ಹಾಲು ಬರೋ ಹತ್ತಿ ಮರ ಅಥವಾ ಇನ್ನಿತರೆ ಮರಗಳ ಒಂದು ಕಂಬವನ್ನು ನಿಲ್ಲಿಸಿ, ಅದರ ಸುತ್ತಲೂ ಸುಮಾರು 20 ಅಡಿ ಎತ್ತರ, 15 ಅಡಿ ಸುತ್ತಳತೆಯಲ್ಲಿ ಬಾರೇಕಳ್ಳಿಯಿಂದ ಗೋಪುರ ನಿರ್ಮಿಸಿ, ನಂತರ ಗೋಪುರದ ತುದಿಯಲ್ಲಿ ಕಳಶವಿಡಲಾಗುತ್ತದೆ. ಗುಡಿಯಲ್ಲಿ ಕಾಡುಗೊಲ್ಲ ಜನಾಂಗದ ಆರಾಧ್ಯ ದೈವ ಕ್ಯಾತಪ್ಪ ದೇವರನ್ನು ಪ್ರತಿಷ್ಠಾಪಿಸುವ ದೃಶ್ಯ ನೋಡುಗರನ್ನು ಮೈನವಿರೇಳಿಸುತ್ತದೆ.

13 ಗುಡಿಕಟ್ಟಿನ ಕಾಡುಗೊಲ್ಲ ಸಮುದಾಯದವರು ಈ ಜಾತ್ರೆಗಾಗಿಯೇ ಸಿದ್ಧಮಾಡುವ ಈ ಮುಳ್ಳಿನ ಗುಡಿಯೊಳಗೆ 13 ಗುಡಿಕಟ್ಟಿನ ದೇವರುಗಳನ್ನು ಪ್ರತಿಷ್ಠಾಪಿಸಿ, ಜಾತ್ರೆಯ ಕೊನೆಯ ದಿನ ಉಪವಾಸವಿದ್ದು ಕಟ್ಟುನಿಟ್ಟಿನ ನಿಯಮ ಪಾಲಿಸಿದ 5 ಜನ ‘ಈರಗಾರರು’ ಮೆರವಣಿಗೆಯಲ್ಲಿ ಬಂದು ಬರಿಗಾಲಿನಲ್ಲಿ ಈ ಮುಳ್ಳಿನ ಗುಡಿ ಮೇಲೆ ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ಹತ್ತಿ ಕಳಶ ಕೀಳುವ ಅಪರೂಪದ ಆಚರಣೆ ಎಲ್ಲರನ್ನು ರೋಮಾಂಚನಗೊಳಿಸುತ್ತದೆ.

ಕೋಟೆನಾಡಿನಲ್ಲಿ ಕಾಡುಗೊಲ್ಲ ಸಮುದಾಯದ ಈ ಮುಳ್ಳಿನ ಜಾತ್ರೆ ಬುಧವಾರ ಆರಂಭವಾಗಿದ್ದು, 15 ದಿನಗಳ ಕಾಲ ನಡೆಯಲಿದೆ. ಜಾತ್ರೆಯ ಕೊನೆಯ ದಿನದಂದು ಮುಳ್ಳಿನ ಗುಡಿ ಮೇಲಿನ ಕಳಶ ಕೀಳುವ ವಿಶಿಷ್ಠ ಆಚರಣೆಯ ಕ್ಷಣಕ್ಕೆ ಸಾಕ್ಷಿಯಾಗಲು ಇಲ್ಲಿನ ಜನ ಕಾತರರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *