ಚಿಕ್ಕಬಳ್ಳಾಪುರ: ಒಪನ್ ಟ್ರಕ್ ಲಾರಿ ಹಾಗೂ ಟಿಟಿ ವಾಹನದ ನಡುವೆ ಅಪಘಾತ ಸಂಭವಿಸಿ ಮೂವರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ಪಟ್ಟಣ ಹೊರವಲಯದ ರಾಣಿ ಕ್ರಾಸ್ ಸಮೀಪ ಘಟನೆ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ಮೂಲದ ಜಯಮ್ಮ (65), ಯಶೋಧಮ್ಮ (60) ಹಾಗೂ ಗಂಗಾ (38) ಮೃತರು. ಅಂದಹಾಗೆ ತಿಪಟೂರು ಮೂಲದ 12 ಮಂದಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಪ್ಲಾನ್ ಮಾಡಿಕೊಂಡು ಕಾಶಿ ಯಾತ್ರೆಗೆ ಟ್ರಿಪ್ ಹೊರಟಿದ್ದರು. ಟಿಟಿ ಮೂಲಕ ಕೆಂಪೇಗೌಡ ಏರ್‌ಪೋರ್ಟ್ ತಲುಪಿ ಅಲ್ಲಿಂದ ಕಾಶಿ ಯಾತ್ರೆ ಪ್ರವಾಸಕ್ಕೆ ಹೊರಡಲು ಮುಂದಾಗಿದ್ದರು. ಇದನ್ನೂ ಓದಿ: ಬೆಂಗಳೂರು | ನಿಂತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು
ಇಂದು ಬೆಳಗ್ಗೆ 6 ಗಂಟೆಗೆ ವಿಮಾನದ ಮೂಲಕ ಕಾಶಿಯತ್ತ ಹೊರಡಬೇಕಿತ್ತು. ಆದರೆ, ದುರಾದೃಷ್ಟವಶಾತ್ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಏರ್‌ಪೋರ್ಟ್‌ಗೆ ಬರುವಾಗ ಟಿಟಿ ಚಾಲಕ ರಾಣಿ ಕ್ರಾಸ್ ಬಳಿ ಸರ್ವಿಸ್ ರಸ್ತೆಗೆ ತೆಗೆದುಕೊಳ್ಳುವಾಗ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಟಿಟಿ ಒಪನ್ ಟ್ರಕ್ ಲಾರಿಯ ಹಿಂಬದಿ ಚೂಪಾದ ತುದಿಗೆ ಡಿಕ್ಕಿಯಾದ ಪರಿಣಾಮ ಟಿಟಿ ಎಡಬದಿ ಸಂಪೂರ್ಣ ಕಿತ್ತುಬಂದು, ಎಡಬದಿ ಸೀಟುಗಳಲ್ಲಿ ಕೂತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ ಉಳಿದವರು ಗಾಯಗೊಂಡಿದ್ದಾರೆ.
ಟಿಟಿಯಲ್ಲಿ ಚಾಲಕ ಹಾಗೂ 12 ಮಂದಿ ಮಹಿಳೆಯರು ಇದ್ದರು. ಮೃತ ಪತ್ನಿ ಗಂಗಾಳನ್ನು ಬೀಳ್ಕೋಡಲು ಗಂಡ ಸಹ ಟಿಟಿಯಲ್ಲಿ ಬಂದಿದ್ದ. ಗಾಯಾಳುಗಳಲ್ಲಿ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಘಟನೆ ನಂತರ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದ ಕಾರ್ ಡ್ರಿಫ್ಟಿಂಗ್? – ಪೊಲೀಸರಿಂದ ಲ್ಯಾಂಬೊರ್ಗಿನಿ ಸೀಜ್

