ಬಳ್ಳಾರಿ| ಒಂದೇ ದಿನ ಸಿಸೇರಿಯನ್‌ – ಮೂವರು ಗರ್ಭಿಣಿಯರು ಸಾವು, ಐಸಿಯುನಲ್ಲಿ ನಾಲ್ವರಿಗೆ ಚಿಕಿತ್ಸೆ

Public TV
2 Min Read

– ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ
– ಮೂವರ ಸಾವಿಗೆ IV Fluid ಔಷಧಿಯೇ ಕಾರಣ?
– ಇನ್ನೂ ಬಳ್ಳಾರಿಗೆ ಭೇಟಿ ನೀಡಿಲ್ಲ ಜಮೀರ್‌ ಅಹ್ಮದ್‌

ಬಳ್ಳಾರಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನ. 9 ರಂದು ಸಿಸೇರಿಯನ್ (Cesarean) ಒಳಗಾಗಿದ್ದ ಮೂವರು ಬಾಣಂತಿಯರು ಏಕಾಏಕಿ ಸಾವನ್ನಪ್ಪಿದ ಪ್ರಕರಣ ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ನ.9 ರಂದು ಹೆರಿಗೆಗೆ ಬಂದಿದ್ದ ಏಳು ಗರ್ಭಿಣಿಯರು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (Ballari District Hospital) ಸಿಸೇರಿಯನ್‌ಗೆ ಒಳಗಾಗಿದ್ದರು. ನ.10 ರಂದು ನಂದಿನಿ ಮತ್ತು ಲಲಿತಮ್ಮ ಸಾವನ್ನಪ್ಪಿದ್ದರೆ ನ.13 ರಂದು ರೋಜಮ್ಮ ಮೃತಪಟ್ಟಿದ್ದರು. ಉಳಿದ ನಾಲ್ವರು ಬಾಣಂತಿಯರು ಬಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವಿಗೆ ಕಾರಣ ಏನು?
ಮೂವರು ತಾಯಂದಿರ ಸಾವಿಗೆ ಅಸಲಿ ಕಾರಣ ಇನ್ನೂ ತಿಳಿದು ಬಾರದೇ ಇದ್ದರೂ ಮೇಲ್ನೋಟಕ್ಕೆ ಇದು ಮೆಡಿಕಲ್ ರಿಯಾಕ್ಷನ್ ಎನ್ನುವ ಅನುಮಾನ ಶುರುವಾಗಿದೆ. ಮೂವರ ಸಾವಿಗೆ IV Fluid ಔಷಧಿಯೇ ಕಾರಣ  ಎಂಬ ಸಂಶಯ ವ್ಯಕ್ತವಾಗುತ್ತಿದೆ. ಯಾಕೆಂದರೆ ಸಿಸೇರಿಯನ್ ಬಳಿಕ ವೈದ್ಯರು ಐವಿ ಫ್ಲೂಯಿಡ್ ಹಾಗೂ ಎನ್‌ಎಸ್‌ಎಲ್‌ ಗ್ಲುಕೋಸ್‌ ಹಾಕಿದ್ದರು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(KSMSCL) ಕಳುಹಿಸಿದ್ದ ಗ್ಲುಕೋಸ್‌ಗಳನ್ನು ನ. 9 ರಂದು ಹಾಕಲಾಗಿತ್ತು. ಆ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ನ.10 ರಂದು ನಂದಿನಿ ಹಾಗೂ ಲಲಿತಮ್ಮ ಮೃತಪಟ್ಟಿದ್ದರು. ಕೂಡಲೇ ಇನ್ನುಳಿದ ಐದು ಬಾಣಂತಿಯರನ್ನು ಬಿಮ್ಸ್‌ಗೆ ರವಾನೆ ಮಾಡಲಾಗಿತ್ತು. ಇದನ್ನೂ ಓದಿ: ಬಿಪಿಎಲ್, ಎಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್!

 

KSMSCL ಕಳುಹಿಸಿದ್ದ ಗ್ಲುಕೋಸ್‌ಗಳೇ ಇದಕ್ಕೆಲ್ಲಾ ಕಾರಣ ಎಂಬ ಬಲವಾದ ಅನುಮಾನ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ ಮೂಲದ ಒಂದು ಖಾಸಗಿ ಮೆಡಿಕಲ್ ಸಪ್ಲೈ ಕಂಪನಿಯಿಂದ ಈ ಗ್ಲುಕೋಸ್‌ ಖರೀದಿಸಲಾಗಿದೆ. ಈ ಹಿಂದೆ ಈ ಕಂಪನಿಯನ್ನು ಬ್ಲಾಕ್‌ ಲಿಸ್ಟ್‌ಗೆ ಹಾಕಲಾಗಿತ್ತು ಎನ್ನಲಾಗುತ್ತಿದೆ. ಇದೇ ಕಂಪನಿ ನೀಡಿದ ಮೆಡಿಸಿನ್ ಪಡೆದು ತುಮಕೂರಿನಲ್ಲೂ ಹಲವರು ಸಾವಿಗೀಡಾಗಿದ್ದರು. ಈಗ ಅದೇ ಕಂಪನಿಯ ಔಷಧಿಯಿಂದಲೇ ಬಳ್ಳಾರಿಯ ಬಾಣಂತಿಯರ ಸಾವಾಗಿರಬಹುದು ಎನ್ನುವ ಶಂಕೆ ಇದೆ.

ಆರೋಗ್ಯವಾಗಿವೆ ಶಿಶುಗಳು:
ಮೂವರು ಬಾಣಂತಿಯರಿಗೆ ಜನಿಸಿರುವ ಶಿಶುಗಳು ಆರೋಗ್ಯದಿಂದ ಇವೆಯಾದರೂ ಮೃತ ಬಾಣಂತಿಯರ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಏನೂ ಅರಿಯದ ಹಸುಳೆಗಳನ್ನ ಕಂಡು ಮಮ್ಮಲ ಮರುಗುತ್ತಿದ್ದಾರೆ.

ರೋಜಾಮ್ಮ ಅವರ ಗಂಡ ರಾಜಾ ಹೆಂಡತಿಯ ಸಾವನ್ನು ಅರಗಿಸಿಕೊಳ್ಳಲಾಗದೇ ಶುಕ್ರವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊಪ್ಪಳದ ಗಂಗಾವತಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಡೀ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖಾ ತಂಡವನ್ನು ರಚಿಸಿದೆ. ಇದರ ನಡುವೆ ಸಂಸದ ಈ ತುಕಾರಾಂ, ಶಾಸಕ ನಾರಾ ಭರತ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದ್ದು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಚುನಾವಣೆಯಲ್ಲಿ ಜಮೀರ್‌ ಬ್ಯುಸಿ:
ಇಷ್ಟೊಂದು ದೊಡ್ಡ ಘಟನೆ ಸಂಭವಿಸಿದರೂ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಇನ್ನೂ ಬಳ್ಳಾರಿಗೆ ಬಂದಿಲ್ಲ. ಕರ್ನಾಟಕ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಜಮೀರ್‌ ಮುಂದೆ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

 

Share This Article