ಛತ್ತೀಸ್‍ಗಢ್: ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಶಿಕ್ಷಕರ ಕಾರಿನ ಮೇಲೆ ಸಣ್ಣ ಗೀಟು ಹಾಗೂ ನಂಬರ್ ಪ್ಲೇಟ್ ಗೆ ಹಾನಿ ಮಾಡಿದ್ದಕ್ಕೆ ಇಬ್ಬರು ಶಿಕ್ಷಕರು ಮೂವರು ವಿದ್ಯಾರ್ಥಿಗಳನ್ನು ಕೊಣೆಯಲ್ಲಿ ಕೂಡಿಹಾಕಿ ಥಳಿಸಿದ ಘಟನೆ ಛತ್ತೀಸ್‍ಗಢದ ಕೊರಿಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬೈಕುಂಥಪುರ ಪಟ್ಟಣದಲ್ಲಿರುವ ಜವಾಹರ್ ಸರ್ಕಾರಿ ವಸತಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಈ ವೇಳೆ ಅಲ್ಲಿಯೇ ನಿಲ್ಲಿಸಿದ್ದ ಬಿಪಿ ಗುಪ್ತಾ ಎಂಬ ಶಿಕ್ಷಕನ ಕಾರಿಗೆ ಹಾನಿಯಾಗಿತ್ತು. ಇದರಿಂದ ಸಿಟ್ಟಾದ ಶಿಕ್ಷಕ ತನ್ನ ಸಹೋದ್ಯೋಗಿ ಕುಮಾರ್ ಚಕ್ರವರ್ತಿ ಜೊತೆ ಸೇರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯ ಮುಖ್ಯಸ್ಥರ ಬುಧವಾರ ಸಂಜೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಬಿಪಿ ಗುಪ್ತಾ ಮತ್ತು ಕುಮಾರ್ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವೈದ್ಯಕೀಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಶಿಕ್ಷಕರ ಮೇಲೆ 342, 323 ಮತ್ತು 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅವರ ಬಂಧನ ಶೀಘ್ರದಲ್ಲೇ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಸ್.ಕೆ ಅನಂತ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಪೊಲೀಸರು, ಘಟನೆಯಲ್ಲಿ ಶಿಕ್ಷರಿಂದ ಹೊಡೆದ ತಿಂದ ಮೂವರು ವಿದ್ಯಾರ್ಥಿಗಳು 12 ವರ್ಷದವರಾಗಿದ್ದು, ಶಿಕ್ಷಕರು ಶಾಲೆಯಲ್ಲಿ ಥಳಿಸಿದ್ದಲ್ಲದೇ ಕ್ಯಾಂಪಸ್‍ನಲ್ಲೇ ಇರುವ ಅವರ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಮಕ್ಕಳಿಗೆ ಕೋಲು ಮತ್ತು ಬೆಲ್ಟ್‍ನಿಂದ ಥಳಿಸಿ ಮೂರು ಗಂಟೆಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಶಿಕ್ಷಕರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆದರೆ ಬಂದನ ಮಾಡಿಲ್ಲ. ಘಟನೆ ಬಳಿಕ ಶಿಕ್ಷಕರನ್ನು ಶಾಲೆಯಿಂದ ಅಮಾತನತು ಮಾಡಿ ಆದೇಶ ಮಾಡಲಾಗಿದೆ ಎಂದು ಶಾಲೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.