ಪಾಟ್ನಾ: ಕಾರ್ ಅಪಘಾತಕ್ಕೀಡಾಗಿ ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರು ದುರ್ಮರಣಕ್ಕೀಡಾದ ಘಟನೆ ಬಿಹಾರದ ಆರಾರಿಯಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಆರ್ ಜೆಡಿ ಕಾರ್ಯಕರ್ತ ಹಾಗೂ ಮಾಜಿ ಮಂತ್ರಿ ಇಸ್ಲಾಮುದ್ದೀನ್ ಪುತ್ರ ಇಕ್ರಮುಲ್ ಹಾಕ್ ಬಾಘಿ, ಇಂಟೆಕ್ಹಾಬ್ ಆಲಂ, ಪಪ್ಪು ಹಾಗೂ ಚಾಲಕ ಶಾಹಿಲ್ ಎಂದು ಗುರುತಿಸಲಾಗಿದೆ.
ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮದ್ವೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಕಾರ್ ಕಿಶಾನ್ ಗಂಜ್ ನಿಂದ ಪಾಟ್ನಾ ಕಡೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ರಸ್ತೆ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿವೈಡರ್ ಇಬ್ಭಾಗವಾಗಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ಸದ್ಯ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ಎಂಬವನರನ್ನು ವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅತಿಥಿಗಳು, ವಿಐಪಿಗಳು ಭಾಗಿಯಾಗಿದ್ದರು.