ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ (Bardhaman Railway Station) ಭಾನುವಾರ (ಇಂದು) ಸಂಜೆ ಕಾಲ್ತುಳಿತ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಹಲವು ಮಾರ್ಗಗಳಿಗೆ ತೆರಳಬೇಕಿದ್ದ ರೈಲುಗಳು ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತಿದ್ದವು. ರೈಲಿನಿಂದ ಜನ ಇಳಿಯುತ್ತಿದ್ದಾಗಲೇ ಹತ್ತಬೇಕಿದ್ದ ಜನರು ಒಂದೇ ಸಮನೇ ನುಗ್ಗಿದ ಪರಿಣಾಮ ಕಾಲ್ತುಳಿತ (Stampede) ಸಂಭವಿಸಿದೆ. ಫ್ಲಾಟ್ ಫಾರ್ಮ್ 4 ಮತ್ತು 5ರಲ್ಲಿ ಕಾಲ್ತುಳಿತ ಸಂಭವಸಿದ್ದು, ಕನಿಷ್ಠ 7 ಮಂದಿ ಗಾಯಗೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂಜೆ ಸುಮಾರಿಗೆ, ಮೂರು ರೈಲುಗಳು 4, 6 ಮತ್ತು 7 ಪ್ಲಾಟ್‌ಫಾರ್ಮ್‌ಗಳಲ್ಲಿ ಏಕಕಾಲದಲ್ಲಿ ಬಂದು ನಿಂತಿದ್ದವು. ಹಾಗಾಗಿ ಮೂರು ರೈಲುಗಳಿಗೆ ಹತ್ತಲು ಜನ ಏಕಕಾಲಕ್ಕೆ ನುಗ್ಗಿದರು. ಇದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನ ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲ್ವೆ ಪ್ರಯಾಣಿಕರು ಮತ್ತು ಆರ್‌ಪಿಎಫ್ ಮೂಲಗಳ ಪ್ರಕಾರ, ಇಂದು ಸಂಜೆ 5:15 ರಿಂದ 5:25ರ ನಡುವೆ ಪ್ಲಾಟ್‌ಫಾರ್ಮ್ 4 ಮತ್ತು 5 ಅನ್ನು ಸಂಪರ್ಕಿಸುವ ಮೆಟ್ಟಿಲುಗಳಲ್ಲಿ ಘಟನೆ ಸಂಭವಿಸಿದೆ.
ಇನ್ನೂ ಹಲ್ದಿಬರಿ ಎಕ್ಸ್‌ಪ್ರೆಸ್ (ಪ್ಲಾಟ್‌ಫಾರ್ಮ್ 5 ರಲ್ಲಿ), ಹೌರಾ ಮೇನ್ ಲೈನ್ ಸ್ಥಳೀಯ ರೈಲು (ಪ್ಲಾಟ್‌ಫಾರ್ಮ್ 4 ರಲ್ಲಿ) ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಏಕಕಾಲಕ್ಕೆ ಧಾವಿಸಿದ್ದೇ ಘಟನೆ ಕಾರಣ ಎಂದು ವರದಿಗಳು ತಿಳಿಸಿವೆ.