ಮನೆಯಲ್ಲೇ ಬಾಂಬ್‌ ತಯಾರಿ ವೇಳೆ ಸ್ಫೋಟ – ಮೂವರು ಸಾವು

Public TV
1 Min Read

ಕೊಲ್ಕತ್ತಾ: ದೇಶಿ ನಿರ್ಮಿತ ಬಾಂಬ್‌ಗಳು ಸ್ಫೋಟಗೊಂಡ (Explosion) ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ (West Bengal) ಖಯರ್ತಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮಾಮುನ್ ಮೊಲ್ಲಾ, ಸಕಿರುಲ್ ಸರ್ಕಾರ್ ಮತ್ತು ಮುಸ್ತಾಕಿನ್ ಶೇಖ್ ಎಂದು ಗುರುತಿಸಲಾಗಿದೆ. ಮಾಮುನ್ ಮೊಲ್ಲಾ ಎಂಬವರ ಮನೆಯಲ್ಲಿ ಅಕ್ರಮವಾಗಿ ದೇಶೀ ನಿರ್ಮಿತ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವು ಸ್ಫೋಟಗೊಂಡಿದ್ದು, ಮೂವರು ಸಾವಿಗೀಡಾಗಿದ್ದಾರೆ. ರಾತ್ರಿ ವೇಳೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿದಾಗ ಇದಕ್ಕೆ ಕಾರಣವೇನು ಎಂದು ತಿಳಿದಿರಲಿಲ್ಲ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಸ್ಫೋಟದಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್‌ ತಯಾರಿಕೆ ವೇಳೆ ಏನೋ ಸಮಸ್ಯೆಯಾಗಿ ಸ್ಫೋಟಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article