ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.
ಅಚೇಪಲ್ಲಿ ಗ್ರಾಮದ ವಿಷ್ಣು (14), ನಿಹಾಲ್ ರಾಜ್ (12) ಮತ್ತು ಹರ್ಷವರ್ಧನ್ (16) ಮೃತ ದುರ್ದೈವಿಗಳು. ಇದನ್ನೂ ಓದಿ: ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು
ದಸರಾ ರಜೆ ಹಿನ್ನೆಲೆ ಶಾಲೆಗಳಿಗೆ ರಜೆ ಇದ್ದುದ್ದರಿಂದ ಬಾಲಕರು ಕೆರೆಯಲ್ಲಿ ಈಜಾಡಲು ತೆರಳಿದ್ದರು. ಮೊದಲಿಗೆ ವಿಷ್ಣು ಹಾಗೂ ನಿಹಾಲ್ ರಾಜ್ ಈಜಾಡಲು ತೆರಳಿದ್ದು, ಅವರು ನೀರಿನಲ್ಲಿ ಮುಳುಗುತ್ತಿದ್ದುದ್ದನ್ನು ಕಂಡ ಹರ್ಷವರ್ಧನ್ ರಕ್ಷಣೆಗೆ ಮುಂದಾಗಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮೂವರ ಮೃತದೇಹಗಳನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸ್ವಾಂತಾನ ಹೇಳಿ, ವೈಯುಕ್ತಕವಾಗಿ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.