ಜಾತಿ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಧಮ್ಕಿ, ರೌಡಿಸಂ – ಅಶೋಕ್ ಕಿಡಿ

Public TV
3 Min Read

– ರಸ್ತೆ ಡಾಂಬರೀಕರಣ ಮಾಡದೇ ಉದ್ಯಮಿಗಳ ಬಗ್ಗೆ ಟೀಕೆ

ಬೆಂಗಳೂರು/ಹಾಸನ: ಜಾತಿ ಸಮೀಕ್ಷೆಗೆ (Caste Census) ಮಾಹಿತಿ ನೀಡದವರಿಗೆ ಕಾಂಗ್ರೆಸ್ (Congress) ಸರ್ಕಾರ ಧಮ್ಕಿ ಹಾಕುತ್ತಿದೆ. ಇದು ರೌಡಿಸಂ ಮಾಡುವ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದರು.

ಹಾಸನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿಲ್ಲ. ಇನ್ಫೋಸಿಸ್ ಸುಧಾಮೂರ್ತಿ ಜಾತಿ ಸಮೀಕ್ಷೆಗೆ ಮಾಹಿತಿ ನೀಡಿಲ್ಲವೆಂದಾಕ್ಷಣ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್ ತಂಗಡಗಿ ಧಮ್ಕಿ ಹಾಕಿದ್ದಾರೆ. ಸರ್ಕಾರವೇ ಇಲ್ಲಿ ರೌಡಿಸಂ ಮಾಡುತ್ತಿದೆ. ಮಾಹಿತಿ ನೀಡುವುದು ಜನರ ಇಚ್ಛೆ ಎಂದು ಹೈಕೋರ್ಟ್ ಹೇಳಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿ ಗೂಂಡಾಗಿರಿ ತೋರುತ್ತಿದೆ. ಜಾತಿ ಸಮೀಕ್ಷೆ ಮಾಡುವುದೇ ಅಕ್ರಮವಾಗಿದ್ದು, ಈ ರೀತಿ ಬೆದರಿಕೆ ಹಾಕುವುದು ಮತ್ತೊಂದು ಅಕ್ರಮವಾಗಿದೆ ಎಂದರು.ಇದನ್ನೂ ಓದಿ: ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

ಸುಧಾಮೂರ್ತಿ ಬರೆದುಕೊಟ್ಟಿದ್ದನ್ನು ಬಹಿರಂಗ ಮಾಡಿರುವುದು ತಪ್ಪು. ಯಾರದ್ದೇ ಮಾಹಿತಿಯನ್ನು ಬಹಿರಂಗ ಮಾಡಬಾರದು, ಗೌಪ್ಯತೆ ಕಾಪಾಡಬೇಕು ಎಂದು ಹೈಕೋರ್ಟ್ ಹೇಳಿದೆ. ಇದರ ಜೊತೆಗೆ ಶಿಕ್ಷಕರು, ಅಧಿಕಾರಿಗಳನ್ನೂ ಬೆದರಿಸುತ್ತಿದ್ದಾರೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಯಮಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ರಸ್ತೆ ಸರಿ ಇಲ್ಲ ಎಂದರೆ ನೀತಿಪಾಠ ಹೇಳುತ್ತಾರೆ. ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಮ್‌ದಾರ್ ಶಾ ಪ್ರಶ್ನೆ ಮಾಡಿದರೆ ಅದನ್ನು ಟೀಕೆ ಮಾಡಿದ್ದಾರೆ. ಬೆಂಗಳೂರಿಂದ ಎಲ್ಲವನ್ನೂ ಪಡೆದಿದ್ದಾರೆ ಎನ್ನಲು ಈ ನಗರವನ್ನು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಕಟ್ಟಿ ಬೆಳೆಸಿಲ್ಲ. ತೆರಿಗೆ ಕಟ್ಟುವವರಿಗೆ ಪ್ರಶ್ನೆ ಕೇಳುವ ಅಧಿಕಾರವೂ ಇದೆ. ಬಿಜೆಪಿ ಸರ್ಕಾರವಿದ್ದಾಗಲೂ ಇದೇ ಉದ್ಯಮಿಗಳು ಟ್ವೀಟ್ ಮಾಡಿ ಪ್ರಶ್ನೆ ಕೇಳಿದ್ದರು. ಆಗ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕೂಡಲೇ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ತಿ ಮಾಡಲಾಗಿತ್ತು. ಸಮಸ್ಯೆ ಬಂದಾಗ ತೆಗಳುವುದು ಬಿಟ್ಟು ಸಮಸ್ಯೆ ಬಗೆಹರಿಸಲಿ. ರಸ್ತೆಗುಂಡಿ ಮುಚ್ಚಲು 2,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದರೂ ಅದರ ಫಲಿತಾಂಶ ಕಾಣುತ್ತಿಲ್ಲ. ಈ ಹಣ ಎಲ್ಲಿ ಹೋಗಿದೆ ಎಂದು ಸರ್ಕಾರ ನೋಡಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

ಗೂಗಲ್ ಕಂಪನಿ ಬೆಂಗಳೂರು ಬಿಟ್ಟು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಉದ್ಯಮಿಗಳನ್ನು ಓಡಿಸಿ ಇವರು ಯಾವ ರೀತಿಯ ಅಭಿವೃದ್ಧಿ ಮಾಡುತ್ತಾರೆ? ನಗರದಲ್ಲಿ ಮಳೆ ನಿಂತಿದೆ. ಆದರೂ ಮಳೆ ಬರುತ್ತಿದೆ ಎಂದು ಬೃಹಸ್ಪತಿ ಸಿದ್ದರಾಮಯ್ಯ ನೆಪ ಹೇಳುತ್ತಿದ್ದಾರೆ. ಮಳೆ ಬರುವ ಮುನ್ನವೇ ರಸ್ತೆ ಡಾಂಬರೀಕರಣ ಮಾಡಬೇಕಿತ್ತು. ಉದ್ಯಮಿಗಳೇ ರಸ್ತೆ ನಿರ್ಮಿಸುತ್ತೇವೆ ಎಂದಿದ್ದು, ಇದು ಸರ್ಕಾರಕ್ಕೆ ದೊರೆತ ಛೀಮಾರಿ ಎಂದು ಹೇಳಿದರು.

ಪ್ರವಾಹ ಬಂದಾಗ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಸಭೆ ನಡೆಸದೆ, ಕೇಂದ್ರ ಸರ್ಕಾರದ ಬಳಿ ಹೋಗದೆ ಪರಿಹಾರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ನಿಯಮದ ಅನುಸಾರ ಪರಿಹಾರ ಬಿಡುಗಡೆ ಮಾಡಿದೆ ಎಂದರು.

ಬಿಜೆಪಿ ಸರ್ಕಾರ ಆದೇಶ ಮಾಡಿಲ್ಲ:
ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಆಗಿನ ಸಿಎಂ ಜಗದೀಶ್ ಶೆಟ್ಟರ್ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಇದು ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಯಾಗಿರಲಿಲ್ಲ. ಚಾಮರಾಜಪೇಟೆಯ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶವಾಗಿದೆ. ಇದನ್ನು ಎಲ್ಲಕ್ಕೂ ಅನ್ವಯಿಸಿ ಈಗಿನ ಸರ್ಕಾರ ಆದೇಶ ಮಾಡಿದೆ. ಜಗದೀಶ್ ಶೆಟ್ಟರ್ ಅಥವಾ ಅಂದಿನ ಸಚಿವರ ಸಹಿ ಇರುವ ಆದೇಶವಿದ್ದರೆ ಅದನ್ನು ಬಹಿರಂಗ ಮಾಡಲಿ ಎಂದು ಹೇಳಿದರು.

ಆರ್‌ಎಸ್‌ಎಸ್ ಆರಂಭವಾಗಿ 100 ವರ್ಷದ ಬಳಿಕ ಪಥಸಂಚಲನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಬಂದಿದೆ. ಪ್ರತಿ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುವುದಿಲ್ಲವೇ? ರಂಜಾನ್, ಈದ್ ಮಿಲಾದ್ ವೇಳೆ ರಸ್ತೆ ಬಂದ್ ಮಾಡುತ್ತಾರೆ. ಆಗ ಯಾರೂ ಅನುಮತಿ ಪಡೆದಿರುವುದಿಲ್ಲ. ಕೆಲವು ಕಡೆ ಮೆರವಣಿಗೆಯಲ್ಲಿ ಕತ್ತಿ ಹಿಡಿದು ಆಚರಣೆ ಮಾಡುತ್ತಾರೆ. ಅದನ್ನು ಶಸ್ತ್ರಾಸ್ತ್ರಗಳು ಎಂದು ಪರಿಗಣಿಸುವುದಿಲ್ಲ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಎಂದೂ ಯಾರಿಗೂ ಹಾನಿಯಾಗಿಲ್ಲ ಎಂದರು.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ – ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

Share This Article