ಗಂಗಾಕಲ್ಯಾಣ ಯೋಜನೆಯಲ್ಲಿ ಸಾವಿರಾರು ಕೋಟಿ ಅಕ್ರಮ

By
2 Min Read

ಹಾಸನ: ವಿವಿಧ ನಿಗಮಗಳ ಅಡಿಯಲ್ಲಿ ರಾಜ್ಯಾದ್ಯಂತ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳ ಪರಿಶೀಲನೆ ನಡೆಸುತ್ತಿರುವ ತಂಡ ಇಂದು ಹಾಸನಕ್ಕೂ ಭೇಟಿ ನೀಡಿತ್ತು. ಈ ವೇಳೆ ಭ್ರಷ್ಟ ಅಧಿಕಾರಿಗಳು ಸರ್ಕಾರದ ಹಣವನ್ನು ಗುಳುಂ ಮಾಡಿರುವುದು ಕಂಡುಬಂದಿದೆ.

ಗಂಗಾಕಲ್ಯಾಣ ವಿಶೇಷ ಸದನ ಸಮಿತಿ ಅಧ್ಯಕ್ಷ ವೈ.ಎ.ನಾರಾಯಣಸ್ವಾಮಿ ನೇತೃತ್ವದ ತಂಡ ಇಂದು ಹಾಸನ ಜಿಲ್ಲೆಗೆ ಪ್ರವಾಸ ಮಾಡಿ, ಗಂಗಾಕಲ್ಯಾಣ ಯೋಜನೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆಗಿಳಿದಿತ್ತು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷಗಾದಿ ತಪ್ಪಿಸಿದ ಬಚ್ಚೇಗೌಡ

ಈ ತನಿಖೆ ವೇಳೆ, ರೈತರಿಗೆ ಕಳಪೆ ಗುಣಮಟ್ಟದ ಸಾಮಾಗ್ರಿ ನೀಡಿ ಹೆಚ್ಚು ಬಿಲ್ ಮಾಡಿಕೊಂಡಿರುವುದು. ಕೊಳವೆಬಾವಿಗಳನ್ನು ಕಡಿಮೆ ಆಳಕ್ಕೆ ಕೊರೆಸಿದ್ದರೂ, ಹೆಚ್ಚು ಆಳಕ್ಕೆ ಕೊರೆಸಿರುವುದಾಗಿ ದಾಖಲೆ ಸೃಷ್ಟಿಸಿ ಬಿಲ್ ಮಾಡಿಕೊಂಡಿರುವುದು. ಕೊಳವೆಬಾವಿಗಳನ್ನೇ ಕೊರೆಸದೆ ಬಿಲ್ ಮಾಡಿಕೊಂಡಿರುವುದು ಸೇರಿದಂತೆ ಹಲವಾರು ರೀತಿಯ ಅಕ್ರಮ ಎಸಗಿ ಕೋಟಿ ಕೋಟಿ ಭ್ರಷ್ಟಾಚಾರ ನಡೆಸಿರುವುದು ಕಂಡುಬಂದಿದೆ.

2015 ರಿಂದ 2021ರವರೆಗೆ ಗಂಗಾಕಲ್ಯಾಣ ಯೋಜನೆಯಲ್ಲಿ ರಾಜ್ಯಾದ್ಯಂತ ನಡೆದಿರುವ ಅಕ್ರಮಗಳ ಬಗ್ಗೆ ಸದನ ಸಮಿತಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿದ ಸದನ ಸಮಿತಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬಿಡುಗಡೆಯಾದ ಸರ್ಕಾರದ ಹಣದಲ್ಲಿ ಶೇ.50ಕ್ಕಿಂತ ಹೆಚ್ಚು ಗಂಗಾಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದರು.

ಹಾಸನ ಜಿಲ್ಲೆಯೊಂದರಲ್ಲೇ ವಿವಿಧ ನಿಗಮಗಳಿಂದ ಸುಮಾರು 5 ಸಾವಿರ ಕೊಳೆವೆಬಾವಿ ಕೊರೆಸಲಾಗಿದೆ. ಈ ಲೆಕ್ಕದಲ್ಲಿ ಸುಮಾರು 10 ಸಾವಿರ ಎಕರೆಯಾದರೂ ನೀರಾವರಿ ಯೋಜನೆ ಆಗಬೇಕಿತ್ತು. ಆದರೆ ಅದು ಆಗಿಲ್ಲ. ಕೇವಲ ಸುಳ್ಳು ಲೆಕ್ಕಪತ್ರ ತೋರಿಸಿ, ಕೆಲವೆಡೆ ಕೊಳವೆಬಾವಿ ಕೊರಸದೆಯೇ ಬಿಲ್ ಮಾಡಿಕೊಳ್ಳಲಾಗಿದೆ. ಇದೆಲ್ಲವನ್ನು ನೋಡಿದ್ರೆ ರಾಜ್ಯದಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮ ತಗೆದುಕೊಳ್ಳುತ್ತೆ: ಭಗವಂತ್ ಖೂಬಾ

ಕೊಳವೆಬಾವಿ ಅವ್ಯವಹಾರದ ಬಗ್ಗೆ ರಾಜ್ಯಾದ್ಯಂತ ತನಿಖೆ ನಡೆಸುತ್ತಿರುವ ಸದನ ಸಮಿತಿ ತಂಡ, ಒಂದೂವರೆ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮೇಲ್ನೋಟಕ್ಕೆ ಗಂಗಾಕಲ್ಯಾಣ ಯೋಜನೆಯಲ್ಲಿ ಕೋಟಿ ಕೋಟಿ ಸರ್ಕಾರದ ಹಣ ಲೂಟಿ ಆಗಿರುವುದು ಕಂಡುಬಂದಿದೆ. ಆದ್ರೆ ವರದಿ ಸಲ್ಲಿಕೆಯಾದ ನಂತರ ಬಡ ರೈತರಿಗಾಗಿ ಸರ್ಕಾರ ನೀಡಿದ ಹಣವನ್ನು ತಿಂದುತೇಗಿದ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *