ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

By
2 Min Read

ನ್ಯೂಯಾರ್ಕ್: ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಸುವವರು ಭಯೋತ್ಪಾದನೆಯು ತಮಗೂ ಅಪಾಯಕಾರಿ ಎಂಬುದನ್ನು ತಿಳಿದಿರಬೇಕು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಫ್ಘಾನ್ ನೆಲವನ್ನು ಭಯೋತ್ಪಾದನೆಗೆ ತಳಪಾಯವಾಗಿ ಬಳಸದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಕೆಲ ದೇಶಗಳು ತಮ್ಮ ಆಸಕ್ತಿಯನ್ನು ಹೆಚ್ಚಿಸಲು ಅಫ್ಘಾನಿಸ್ತಾನವನ್ನು ತಮ್ಮ ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಪಾಕಿಸ್ತಾನನ ಹೆಸರನ್ನು ಹೇಳದೇ ಎಚ್ಚರಿಕೆ ನುಡಿಯನ್ನು ಆಡಿದರು.

ಅಫ್ಘಾನಿಸ್ತಾನದಲ್ಲಿ, ಅಲ್ಪಸಂಖ್ಯಾತರಿಗೆ ಸಹಾಯ ಬೇಕು. ನಾವು ನಮ್ಮ ಜವಾಬ್ದಾರಿಯನ್ನು ಪೂರೈಸಬೇಕು. ನಾವು ಸಾಗರ ಸಂಪನ್ಮೂಲಗಳನ್ನು ಬಳಸಬಹುದೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಆದರೆ ಅವುಗಳನ್ನು ದುರ್ಬಳಕೆ ಮಾಡಬಾರದು. ಪ್ರಪಂಚವು ಸಾಗರಗಳನ್ನು ವಿಸ್ತರಣೆಯಿಂದ ರಕ್ಷಿಸಬೇಕು ಮತ್ತು ಸಮುದ್ರ ವ್ಯಾಪಾರವನ್ನು ಮುಕ್ತವಾಗಿರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಮೋದಿ ಭಾಷಣದ ಮುಖ್ಯಾಂಶಗಳು
ಜಗತ್ತಿನ ಪ್ರತಿ ಆರನೇ ವ್ಯಕ್ತಿ ಭಾರತೀಯ. ಭಾರತ ಬೆಳೆದಾಗ ಜಗತ್ತು ಬೆಳೆಯುತ್ತದೆ. ಭಾರತದಲ್ಲಿ ಸುಧಾರಣೆಯಾದಾಗ ಪ್ರಪಂಚವು ಬದಲಾಗುತ್ತದೆ.

ನಾವು ಭಾರತವನ್ನು ವಿಶ್ವದ ಅತಿದೊಡ್ಡ ಹಸಿರು ಜಲಜನಕ ಕೇಂದ್ರವನ್ನಾಗಿಸುವ ಕೆಲಸವನ್ನೂ ಆರಂಭಿಸಿದ್ದೇವೆ.

75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತದ ವಿದ್ಯಾರ್ಥಿಗಳು ಮಾಡಿದ 75 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಿದೆ.

ಭಾರತವು ವಿಶ್ವದ ಮೊದಲ ಡಿಎನ್‍ಎ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ವಿಶ್ವ ಸಂಸ್ಥೆಯಲ್ಲಿ ಹೇಳಲು ನನಗೆ ಸಂತೋಷವಾಗುತ್ತಿದೆ. ಇದನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ನೀಡಬಹುದು. ಒಂದು mRNA ಲಸಿಕೆ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ಭಾರತೀಯ ವಿಜ್ಞಾನಿಗಳು ಮೂಗಿನ ಮೂಲಕ ನೀಡಲು ಲಸಿಕೆಯನ್ನೂ ಅಭಿವೃದ್ಧಿಪಡಿಸುತ್ತಿದ್ದಾರೆ.  ಇದನ್ನೂ ಓದಿ: ಕ್ವಾಡ್ ಜಾಗತಿಕ ಒಳಿತಿಗಾಗಿ ಸದಾ ಶ್ರಮಿಸುತ್ತದೆ: ಪ್ರಧಾನಿ ಮೋದಿ 

ಪ್ರಪಂಚದಾದ್ಯಂತದ ಇರುವ ಲಸಿಕೆ ತಯಾರಕರಿಗೆ ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ನಾನು ಆಹ್ವಾನ ನೀಡುತ್ತಿದ್ದೇನೆ.

ಭಾರತವು ಇಂದು ಸಮಗ್ರ ಸಮಾನತೆಯ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಎಲ್ಲರನ್ನೂ ಒಳಗೊಂಡು, ಎಲ್ಲರನ್ನು ಮುನ್ನಡೆಸುವುದೇ ನಮ್ಮ ಆದ್ಯತೆ.

ಕಳೆದ 1.5 ವರ್ಷಗಳಲ್ಲಿ, ಇಡೀ ವಿಶ್ವವು 100 ವರ್ಷಗಳಲ್ಲಿ ಅತ್ಯಂತ ಭೀಕರವಾದ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ, ಈ ಮಾರಕ ಸಾಂಕ್ರಾಮಿಕದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *