ಇದು ನನ್ನ ಕೊನೆಯ ರ‍್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ: ಪ್ರಧಾನಿ ಮೋದಿ

2 Min Read

ಕೋಲ್ಕತ್ತಾ: ಇದು ನನ್ನ ಕೊನೆಯ ರ‍್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ (Assembly Election) ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಏ.27) ಬರ್ರಾಕ್‌ಪುರ್‌ದಲ್ಲಿ ಆಯೋಜಿಸಲಾದ ರ‍್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದರು. ಹೆಲಿಪ್ಯಾಡ್‌ನಿಂದ ಇಲ್ಲಿಗೆ ಬರುವಾಗ ಸುಮಾರು ಎರಡು ಕಿ.ಮೀ ದೂರದಲ್ಲಿ ಎರಡೂ ಕಡೆ ಭಾರೀ ಜನಸಮೂಹವಿತ್ತು. ಬೆಳಗ್ಗೆ ಅಷ್ಟು ಮಂದಿ ನನ್ನನ್ನು ಆಶೀರ್ವದಿಸಲು ಬಂದಿರುವುದು ನನಗೆ ಉಹಿಸಲು ಸಾಧ್ಯವಾಗಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಇದು ನನ್ನ ಕೊನೆಯ ರ‍್ಯಾಲಿ. ಮೇ 4ರಂದು ಫಲಿತಾಂಶ ಪ್ರಕಟವಾದ ನಂತರ ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ನಾನು ಖಂಡಿತವಾಗಿ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗಾಗಿ ರಾಹುಲ್‌ ಗಾಂಧಿ ಕೆಲಸ, ಪಪ್ಪು ಅನ್ನೋದ್ರಲ್ಲಿ ತಪ್ಪಿಲ್ಲ: ಕುನಾಲ್ ಘೋಷ್ ಕಿಡಿ

ತೃಣಮೂಲ ಕಾಂಗ್ರೆಸ್ (TMC) ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಕೈಗಾರಿಕೆಗಳು ಕುಸಿದಿವೆ, ಅನೇಕ ಕಾರ್ಖಾನೆಗಳು ಮುಚ್ಚಿವೆ. ಟಿಎಂಸಿ ಸರ್ಕಾರಕ್ಕೆ ಭವಿಷ್ಯದ ಅಭಿವೃದ್ಧಿಗೆ ಸ್ಪಷ್ಟ ರೋಡ್‌ಮ್ಯಾಪ್ ಇಲ್ಲ. ಹೀಗಾಗಿ ಡಬಲ್ ಎಂಜಿನ್ ಸರ್ಕಾರದ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಿದಾಗಲೇ ವೇಗವಾಗಿ ಅಭಿವೃದ್ಧಿ ಸಾಧ್ಯ. ಟಿಎಂಸಿಯ ಸಿಂಡಿಕೇಟ್ ವ್ಯವಸ್ಥೆಯನ್ನು ಕೊನೆಗೊಳಿಸಬೇಕು. ಟಿಎಮ್‌ಸಿ ಭಯೋತ್ಪಾದನೆ ಮತ್ತು ಅಪಶಬ್ದ ರಾಜಕಾರಣದ ಮೇಲೆಯೇ ಅವಲಂಬಿತವಾಗಿದೆ. ಮಹಿಳೆಯರಿಗೆ ರಾಜ್ಯವು ಅಸುರಕ್ಷಿತವಾಗಿದೆ. ಹೀಗಾಗಿ ಮಹಿಳಾ ಮತದಾರರು ಟಿಎಂಸಿ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಯೋಚಿಸಿ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.

ಕೋಲ್ಕತ್ತಾದ ಬಗ್ಗೆ ಮಾತನಾಡುತ್ತಾ, ಟಿಎಂಸಿ ಕೋಲ್ಕತ್ತಾವನ್ನು ಲಂಡನ್‌ನಂತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿತ್ತು. ಆದರೆ ಕಳೆದ 15 ವರ್ಷಗಳಲ್ಲಿ ನಗರದ ಗುರುತೇ ಬದಲಾಗಿದೆ. ಅಕ್ರಮ ವಲಸಿಗರು ನಗರದಲ್ಲಿ ನೆಲೆಸುವಂತೆ ಅನುಮತಿ ನೀಡಲಾಗಿದೆ ಆರೋಪಿಸಿ, ಕೋಲ್ಕತ್ತಾ ನಿವಾಸಿಗಳು ನಗರದ ಮೂಲ ಗುರುತನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಯುವಕರಿಗೆ ಐದು ಮುಖ್ಯ ಗ್ಯಾರಂಟಿಗಳನ್ನು ಘೋಷಿಸಿದ ಪ್ರಧಾನಿ ಮೋದಿ, ಸರ್ಕಾರಿ ನೇಮಕಾತಿಗಳನ್ನು ಸಮಯಕ್ಕೆ ಸರಿಯಾಗಿ ನಡೆಸುವುದು, ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು, ಕೌಶಲ್ಯ ಅಭಿವೃದ್ಧಿಗೆ ಹೊಂದಿಕೊಂಡ ಉದ್ಯೋಗ ಸೃಷ್ಟಿ, 7ನೇ ವೇತನ ಆಯೋಗದ ಪ್ರಯೋಜನಗಳು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹೆಚ್ಚಿಸುವ ಜಿ-ರಾಮ್ ಯೋಜನೆ ಜಾರಿ ಮಾಡಲಾಗುವುದು. ಇನ್ನೂ ರಾಜ್ಯದಲ್ಲಿ ಮಹಿಳೆಯರು ರಾತ್ರಿಯೂ ಸುರಕ್ಷಿತವಾಗಿ ಓಡಾಡುವಂತೆ, ಮಹಿಳೆಯರಿಗೆ ನ್ಯಾಯ ದೊರೆಯುವಂತೆ ಮತ್ತು ಉತ್ತಮ ಕಾನೂನು ಸುವ್ಯವಸ್ಥೆಗಾಗಿ `ಕಮಲ’ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಬಂಗಾಳದ ತಾಯಿ ಕಣ್ಣೀರಿಡುತ್ತಿದ್ದಾಳೆ, ರಾಜ್ಯ ನುಸುಳುಕೋರರಿಂದ ತುಂಬಿದೆ, ಜನ ಭಯಭೀತರಾಗಿದ್ದಾರೆ: ಟಿಎಂಸಿ ವಿರುದ್ಧ ಮೋದಿ ವಾಗ್ದಾಳಿ

Share This Article