ರವಿ ಬೆಳಗೆರೆ ಹೆಸರನ್ನ ಸುಪಾರಿ ಹಂತಕ ಬಾಯ್ಬಿಟ್ಟಿದ್ದು ಹೇಗೆ? ಬೆಳಗೆರೆ ಕಚೇರಿಯಲ್ಲಿ ಏನು ಸಿಕ್ಕಿದೆ?

Public TV
3 Min Read

ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಹಿರಿಯ ಪತ್ರಕರ್ತ ರವಿಬೆಳಗೆರೆ ಮತ್ತು ಸುಪಾರಿ ಕಿಲ್ಲರ್‍ಗಳ ಬಂಧನವಾಗಿದೆ.

ಡಿಸೆಂಬರ್ 3ರಂದು ಬೆಂಗಳೂರು ನಗರ ಸಿಸಿಬಿ ಪೊಲೀಸ್ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡ ಎಂಬಾತನನ್ನು ಬಂಧಿಸಿದ್ದರು. ಈತನನ್ನು ಪೊಲೀಸ್ ಬಂಧನಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಿದಾಗ ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿ ಎಂಬಾತ ಮತ್ತೊಂದು ನಾಡ ಪಿಸ್ತೂಲ್ ಮತ್ತು 02 ಜೀವಂತ ಗುಂಡುಗಳನ್ನು ಪಡೆದುಕೊಂಡಿದ್ದನೆಂದು ತಿಳಿಸಿದ್ದ.

ನಂತರ ಅಕ್ರಮ ಪಿಸ್ತೂಲ್ ಹೊಂದಿದ್ದ ಜಾಲವನ್ನು ಬೆನ್ನಟ್ಟಿದ್ದ ಸಿಸಿಬಿ ಅಧಿಕಾರಿಗಳು ಡಿಸೆಂಬರ್ 07ರಂದು ರಾತ್ರಿ 11.15 ರ ಸಮಯಕ್ಕೆ ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಪತ್ತೆ ಮಾಡಿ ಬಂಧಿಸಿದ್ದರು.ಶಶಿಧರ್ ರಾಮಚಂದ್ರ ಮುಂಡೆವಾಡಿನನ್ನು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕರಾದ ರವಿ ಬೆಳಗೆರೆ ನೀಡಿದ ಸುಪಾರಿಯ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಹೇಳಿದ್ದು ಏನು?: ಸುಪಾರಿ ಮೇರೆಗೆ ಆಗಸ್ಟ್ 28ರಂದು ನಾನು ನನ್ನ ಸಹಚರ ವಿಜು ಬಡಿಗೇರ್ ಜೊತೆಯಲ್ಲಿ ರವಿಬೆಳಗೆರೆ ಕಚೇರಿಗೆ ಬಂದಿದ್ದೆ. ಅದೇ ದಿನ ರವಿ ಬೆಳಗೆರೆ ಶಶಿಧರ್‍ಗೆ ಒಂದು ಗನ್ ಮತ್ತು 04 ಜೀವಂತ ಗುಂಡುಗಳನ್ನು ಹಾಗೂ 01 ಚಾಕುವನ್ನು ನೀಡಿದ್ದರು. ವೈಯಕ್ತಿಕ ವೈಷಮ್ಯದಿಂದಾಗಿ ತನಗೆ ದ್ರೋಹ ಬಗೆದಿರುವ, ಈ ಹಿಂದೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡು. ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆಂದು ಹೇಳಿದರು. ಸುಪಾರಿಗಾಗಿ ಮುಂಗಡವಾಗಿ 15,000 ರೂ. ನೀಡಿದ್ದರು.

ಸಂಚು ಹೀಗಿತ್ತು: ರವಿ ಬೆಳಗೆರೆ ಕಚೇರಿಯ ಒಬ್ಬ ಹುಡುಗ ಶಶಿಧರ್ ಮತ್ತು ವಿಜು ಬಡಿಗೇರ್ ಗೆ ಉತ್ತರಹಳ್ಳಿಯಲ್ಲಿರುವ ಸುನೀಲ್ ಹೆಗ್ಗರವಳ್ಳಿಯ ಮನೆಯನ್ನು ತೋರಿಸಿಕೊಟ್ಟಿದ್ದರು. ನಂತರ ಶಶಿಧರ್ ಮತ್ತು ವಿಜು ಬಡಿಗೇರ್ ಸುನೀಲ್ ಹೆಗ್ಗರವಳ್ಳಿಯನ್ನು ಗನ್‍ನಿಂದ ಶೂಟ್ ಮಾಡಿ ಕೊಲೆ ಮಾಡಲು ಮನೆಯ ಬಳಿ ಕಾಯುತ್ತಿದ್ದರು. ಮನೆಯಿಂದ ಹೊರಬಂದ ಸುನೀಲ್ ಹೆಗ್ಗರವಳ್ಳಿಯನ್ನು ಶೂಟ್ ಮಾಡಲು ಶಶಿಧರ್ ರಾಮಚಂದ್ರ ಮುಂಡೆವಾಡಿ ಗುರಿ ಇಟ್ಟಿದ್ದ. ಆಗ ಸುನೀಲ್ ಮರೆಯಾಗಿ ಸರಿಯಾದ ಸಮಯ ದೊರೆಯದ ಕಾರಣ ಆರೋಪಿ ಶಶಿಧರ್ ರವಿ ಬೆಳಗೆರೆಗೆ ಗನ್ ಹಾಗು ಗುಂಡುಗಳನ್ನು ವಾಪಸ್ ನೀಡಿ ಒಂದು ತಿಂಗಳು ಬಿಟ್ಟು ಬಂದು ಕೆಲಸ ಮುಗಿಸಿಕೊಡುವುದಾಗಿ ತಿಳಿಸಿ ವಾಪಸ್ ಊರಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಚಿನ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಸೆಕ್ಷನ್ 120(ಬಿ), 307 ಸಹಿತ 34 ಜೊತೆಗೆ 1958 ಆಮ್ರ್ಸ್ ಕಾಯ್ದೆಯ 3, 25 ಅಡಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

ಸಿಸಿಬಿ ಅಧಿಕಾರಿಗಳು ಈ ಪ್ರಕರಣದ ಮುಖ್ಯ ಆರೋಪಿ ರವಿ ಬೆಳಗೆರೆಯನ್ನು ಪತ್ತೆ ಮಾಡಲು ನ್ಯಾಯಾಲಯದಿಂದ ಸರ್ಚ್‍ವಾರೆಂಟ್ ಪಡೆದು ಶುಕ್ರವಾರ ಮಧ್ಯಾಹ್ನ 01. 30ಕ್ಕೆ ಹಾಯ್ ಬೆಂಗಳೂರು ಕಚೇರಿಯಲ್ಲಿ ರವಿ ಬೆಳಗೆರೆ ಯವರನ್ನು ಬಂಧಿಸಿದ್ದಾರೆ.

ರವಿ ಬೆಳಗೆರೆ ಕಚೇರಿಯಿಂದ ಒಂದು ರಿವಾಲ್ವಾರ್, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು, ಜಿಂಕೆ ಚರ್ಮ, ಒಂದು ಡಬ್ಬಲ್ ಬ್ಯಾರೆಲ್ ಗನ್, 41 ಜೀವಂತ ಗುಂಡುಗಳು, 1.5 ಅಡಿ*1.5 ಅಡಿ ಉದ್ದಗಲದ ಒಂದು ದೊಡ್ಡ ಆಮೆ ಚಿಪ್ಪನ್ನು ವಶಪಡಿಸಿಕೊಂಡಿದ್ದಾರೆ.

ಶಶಿಧರ್ ಮುಂಡೆವಾಡಿ ವಿರುದ್ಧ ದಾಖಲಾಗಿರುವ ಪ್ರಕರಣಗಳು: 
1. 2006 ರಲ್ಲಿ ಮುತ್ತು ಮಾಸ್ತರ್ ಎಂಬವನನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ
2. 2013 ರಲ್ಲಿ ಬಸಪ್ಪ ಹರಿಜನ್ ಎಂಬಾತನನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ.
3. 2014 ರಲ್ಲಿ ತನ್ನ ಸ್ನೇಹಿತ ಸುರೇಶ್ ಲಾಳಸಂಗಿ ಎಂಬಾತನನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ.
4. 2016ನೇ ಸಾಲಿನಲ್ಲಿ ಇಂಡಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ.
5. 2017 ರಲ್ಲಿ ಮಹಾರಾಷ್ಟ್ರದ ಮೀರಜ್‍ನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

https://www.youtube.com/watch?v=TUKBh2D8Qcw&feature=youtu.be&a

Share This Article
Leave a Comment

Leave a Reply

Your email address will not be published. Required fields are marked *