ಪ್ರವಾಹದಿಂದ ಪಾರಾಗಲು ವಿದ್ಯುತ್ ಕಂಬವೇರಿದ್ದ ವ್ಯಕ್ತಿ- ಭಾರತೀಯ ವಾಯುಪಡೆ ಹೇಗೆ ಕಾಪಾಡಿತು ನೋಡಿ

Public TV
1 Min Read

 

ಅಹಮದಾಬಾದ್: ಪ್ರವಾಹ ಪೀಡಿತ ಗುಜರಾತ್‍ನಲ್ಲಿ ರಕ್ಷಣಾ ಕಾರ್ಯಚರಣೆ ವೇಳೆ ಭಾರತೀಯ ವಾಯು ಪಡೆಯು ವಿದ್ಯುತ್ ಕಂಬವೇರಿದ್ದ ವ್ಯಕ್ತಿಯೊಬ್ಬರನ್ನ ರಕ್ಷಿಸಿದೆ.

ಕಂಬವೇರಿದ್ದ ವ್ಯಕ್ತಿಯನ್ನ ಹೆಲಿಕಾಪ್ಟರ್ ಮೂಲಕ ಮೇಲೆತ್ತಲಾಗಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವ್ಯಕ್ತಿಯು ಪ್ರವಾಹದ ನೀರಿನಿಂದ ಪಾರಾಗಲು ವಿದ್ಯುತ್ ಕಂಬವೇರಿದ್ದರು. ವಾಯು ಪಡೆ ಸಿಬ್ಬಂದಿ ಹಗ್ಗವನ್ನ ಕೆಳಗೆ ಬಿಟ್ಟಿದ್ದು, ಆ ವ್ಯಕ್ತಿ ಅದನ್ನ ಹಿಡಿದುಕೊಂಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಆ ವ್ಯಕ್ತಿಯನ್ನ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ಗುಜರಾತ್‍ನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬನಸ್‍ಕಾಂತಾ ಜಿಲ್ಲೆಯಲ್ಲೇ 29 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಅಲ್ಲದೆ ಗುಜರಾತ್‍ನಾದ್ಯಂತ ಮಳೆಯಿಂದ 123 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಂಗಳವಾರದಂದು ಹೇಳಿದ್ದಾರೆ.

ಗುಜರಾತ್‍ನಲ್ಲಿ ಮಳೆಯಿಂದ ಬನಸ್‍ಕಾಂತಾ ಹಾಗೂ ಪಟನ್ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ.

ಕಳೆದ ಎರಡು ದಿನಗಳಲ್ಲಿ ಉತ್ತರ ಗುಜರಾತ್‍ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ವಾಯು ಪಡೆ, ಸೇನಾ ಪಡೆ, ಬಿಎಸ್‍ಎಫ್ ಹಾಗೂ ಜಿಲ್ಲಾಡಳಿತ ಸುಮಾರು 1930 ಜನರನ್ನ ರಕ್ಷಿಸಿವೆ. ಕಳೆದ ಒಂದು ವಾರದಲ್ಲಿ 53 ಸಾವಿರಕ್ಕೂ ಹೆಚ್ಚಿನ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕಂದಾಯ ಸಚಿವ ಭೂಪೆಂದರ್ ಸಿನ್ಹ್ ಹೇಳಿದ್ದಾರೆ.

ಬನಸ್‍ಕಾಂತಾ ಹಾಗೂ ಪಟನ್ ಜಿಲ್ಲೆಗಳಲ್ಲಿ ಮುಳುಗಡೆಯಾದ ಹಳ್ಳಿಗಳಲ್ಲಿ ಜನರನ್ನ ಏರ್‍ಲಿಫ್ಟ್ ಮಾಡಲು ಹಾಗೂ ಆಹಾರ ಪೊಟ್ಟಣಗಳನ್ನ ಪೂರೈಸಲು ವಾಯುಪಡೆ 16 ಹೆಲಿಕಾಪ್ಟರ್‍ಗಳನ್ನ ಸೇವೆಗೆ ಬಳಸಿಕೊಳ್ತಿದೆ.

Share This Article
Leave a Comment

Leave a Reply

Your email address will not be published. Required fields are marked *