ಸಂಸದ ಶ್ರೀರಾಮುಲು ಹುಟ್ಟುಹಬ್ಬಕ್ಕೆ ಗಾಲಿ ಜನಾರ್ದನ ರೆಡ್ಡಿ ಶುಭ ಕೋರಿದ್ದು ಹೀಗೆ

Public TV
3 Min Read

ಬಳ್ಳಾರಿ: ಇಂದು ಸಂಸದ ಶ್ರೀರಾಮುಲು ಅವರು ತಮ್ಮ 46ನೇ ಜನ್ಮ ದಿನವನ್ನು ಆಚರಿಸಿಕೊಂಡರು. ಗೆಳೆಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕವನಗಳ ಮುಖಾಂತರ ಫೇಸ್ ಬುಕ್ ನಲ್ಲಿ ಶ್ರೀರಾಮುಲುಗೆ ಶುಭಕೋರಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಹತ್ತಿರವಿರುವ ಆತ್ಮೀಯ ಗೆಳೆಯನಿಗೆ ಸುಂದರ ಸಾಲುಗಳ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಫೇಸ್‍ಬುಕ್ ನಲ್ಲಿ ಬರೆದಿದ್ದು ಹೀಗೆ..

ನನ್ನ, ನಿನ್ನ ಸ್ನೇಹ ಆರಂಭವಾದ ದಿನಗಳಲ್ಲಿ ಆಗ ನಮಗೆ ಯಾವುದೇ ಅಧಿಕಾರ, ಅಂತಸ್ತು, ಜಾತಿ, ಮತ ಭೇದ ಇದ್ಯಾವುದರ ಅರಿವು ಇರಲಿಲ್ಲ. ಇಂದಿಗೂ ಇಲ್ಲ. ಅದೇ ಸ್ನೇಹ ನಿಷ್ಕಳಂಕವಾಗಿ ಮುಂದುವರಿಯುತ್ತಿರುವ ಅನೂಹ್ಯ ಸ್ನೇಹ ನಮ್ಮದು. ಹಣ ಅಧಿಕಾರ, ಸಿರಿ ಸಂಪತ್ತು, ಅಂತಸ್ತು ಜೀವನದಲ್ಲಿ ಬರುತ್ತವೆ ಹೋಗುತ್ತವೆ. ಆದರೆ ಎಂದಿಗೂ ನಿನ್ನಲ್ಲಿ ಅಂತಹ ಕೂದಲೆಳೆಯಷ್ಟು ಬದಲಾವಣೆಯನ್ನು ನಾನು ಕಾಣಲೇ ಇಲ್ಲ.

ನನ್ನ ಒಳ್ಳೆಯ ದಿನಗಳಲ್ಲಿ ಹಲವಾರು ಜನರು ನನ್ನಿಂದ ನಾನಾ ರೀತಿಯ ಲಾಭ ಪಡೆದು ಒಳಿತನ್ನು ಪಡೆದಿದ್ದಾರೆ. ನನ್ನ ಕಷ್ಟದ ದಿನಗಳಲ್ಲಿ ಇವರ್ಯಾರು ಸೌಜನ್ಯಕ್ಕಾದರೂ ನನಗೆ ಸಾಥ್ ನೀಡಲಿಲ್ಲ. ಇಂತಹ ಪ್ರಪಂಚದಲ್ಲಿ ಇಂತಹ ಜನರೂ ಇರುತ್ತಾರೆ ಎಂಬುದು ನನಗಾಗ ತಿಳಿಯಿತು. ಅದರೆ ನೀನು ಮಾತ್ರ ಪುನಃ ನನ್ನ ಕಷ್ಟದ ದಿನಗಳಲ್ಲಿ ನನಗೆ ಒಂದು ರೀತಿಯ ವಜ್ರದಂತಹ ರಕ್ಷಾ ಕವಚ ನೀಡಿದೆ. ಆ ಮೂಲಕ ಇಡೀ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದೆ. ಮರು ಜನ್ಮ ನೀಡಿದಂತೆ ನನಗೆ, ನನ್ನ ಕುಟುಂಬದ ಬದುಕಿಗೆ ಹೊಸ ಚೇತನ ನೀಡಿದೆ. ಕಷ್ಟದ ದಿನಗಳಿಂದ ಬೇರ್ಪಡಿಸಿ ಮರು ಹುಟ್ಟು ನೀಡಿದೆ. ಎಂದಿನಂತೆ ಜೀವನ ನಡೆಸುವ ಮಾರ್ಗಕ್ಕೆ ತಂದು ನಿಲ್ಲಿಸಿದ ನಿನ್ನ ಆ ತ್ಯಾಗ, ಸುಗುಣ ಸ್ವಭಾವಕ್ಕೆ, ನಿನ್ನ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಹೃದಯಕ್ಕೆ ಈ ಶುಭ ಸಂದರ್ಭದಲ್ಲಿ ನನ್ನದೊಂದು ನಮ್ರವಾದ ಅಭಿನಂದನೆ.

ಸ್ನೇಹಿತನಿಗೆ ಸ್ನೇಹಜೀವಿಯಾಗಿ, ಬಡವ-ಬಲ್ಲಿದರ ಆದರ್ಶ ನಾಯಕನಾಗಿ ಸದಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ನೀನು ಮಾಡುತ್ತಿರುವ ಸೇವಾ ಯಜ್ಞ, ಹೋರಾಟ ನಿಜಕ್ಕೂ ಅವಿಸ್ಮರಣೀಯ. ಎಂತಹ ಮನುಷ್ಯನಾದರೂ ಕೆಲವೊಂದು ಸಂದರ್ಭದಲ್ಲಿ ಸ್ವಲ್ಪವಾದರೂ ಬದಲಾಗುತ್ತಾನೆ ಅಥವಾ ಬದಲಾದಂತೆ ಭಾಸವಾಗುತ್ತಾನೆ. ನಿನ್ನ ಸ್ನೇಹದ ವಿಷಯದಲ್ಲಿ ಮಾತ್ರ ಹೇಳೋದಾದರೆ ನೀನು ಎಂದಿಗೂ ಬದಲಾಗಲಿಲ್ಲ. ನೀನು ಬದಲಾದಂತೆ ನನಗೆ ಭಾಸವೂ ಆಗಲಿಲ್ಲ.

ನೀನು ಜನಿಸಿದ ನಕ್ಷತ್ರ, ದಿನ, ಮುಹೂರ್ತವೇ ಅಂತಹದ್ದಿದೆ. ನೀನು ಭುವಿಗೆ ಉದಯಿಸಿದ ದಿನ ಖಂಡಿತ ಸುದಿನ ಇರಬೇಕು. ಹೀಗಾಗಿ ನೀನು ಸದಾ ಜನಪರ ಕಾಳಜಿ ಹೊಂದಿರುವೆ. ಜನನಾಯಕನಾಗಿ ಜನಮಾನಸದಲ್ಲಿ ಬೇರೂರಿರುವ ನೀನು ಹೀಗೆ ಸದಾ ನಿನ್ನ ಅತುಲಿತ ಸೇವೆಯನ್ನು ಜನರಿಗಾಗಿ ಮುಂದುವರಿಸುತ್ತಿರು. ಆ ಭಗವಂತ ನಿನಗೆ, ನಿನ್ನ ಕಾರ್ಯಕ್ಷಮತೆಗೆ ಎಲ್ಲವನ್ನೂ ದಯಪಾಲಿಸಲಿ. ಸಹಸ್ರಾರು ತಾರೆಗಳಲ್ಲಿ ದೃವತಾರೆಯಂತೆ ಸದಾ ಕಂಗೊಳಿಸುತ್ತಿರು. ಭಗವಂತನ ಆಶೀರ್ವಾದ, ನೀನು ನಂಬಿದ ಸಿದ್ಧಾಂತದೊಂದಿಗೆ ಜನರ ಪ್ರೀತಿ, ವಿಶ್ವಾಸ, ನಿನ್ನ ಮೇಲೆ ಸದಾ ಹೀಗೆಯೇ ಇರಲಿ. ಇಂತಹ ಅನೇಕ ಹುಟ್ಟು ಹಬ್ಬಗಳನ್ನು ಜೊತೆ ಜೊತೆಗೇ ಆಚರಿಸಿಕೊಳ್ಳುವ ಭಾಗ್ಯ ನಮದಾಗಲಿ. ಸ್ನೇಹಕ್ಕೆ ಯಾವತ್ತೂ ಬೆಲೆ ಕಟ್ಟಲು ಸಾಧ್ಯವೇ?

ವಿಪತ್ಕಾಲದಲ್ಲಿ ಧೈರ್ಯ, ಅಭ್ಯುಧಯ ಉಂಟಾದಾಗ ಕ್ಷಮೆ-ದಯೆ, ಸಭೆ ಸಮಾರಂಭಗಳಲ್ಲಿ ಮಾತಿನ ಚತುರತೆ, ಸೋಲುಗಳು ಉಂಟಾದಾಗ ತೋರಿದ ಪರಾಕ್ರಮ, ಯಶಸ್ಸಿನಲ್ಲಿ ಆಸಕ್ತಿ, ಜನರ ಸೇವೆಯೇ ನಿಜವಾದ ಸಾರ್ಥಕತೆ ಎಂಬ ನಿನ್ನ ಗುಣಕ್ಕೆ ನಾನು ಪರ್ಯಾಯವಾಗಿ ಏನಾದರು ಹೇಳಲುಂಟೆ? ನನ್ನ ಬದುಕಿನ ಬಂಡಿಯಾಗಿ, ಜನಮಾನಸದ ಕೊಂಡಿಯಾಗಿ ದಿನೇ ದಿನೇ ಬಡವರ- ಬಲ್ಲಿದರ ಹಿತ ಚಿಂತನೆ ಮಾಡುತ್ತಲೇ ಕಾಯಕಕ್ಕೆ ಇಳಿಯುವ ನಿನ್ನ ಧರ್ಮ ಗುಣಗಳು ಎಂದಿಗೂ ಅನುಕರಣೀಯ.

ಇದೋ ನನ್ನ ಪ್ರಾಣಸ್ನೇಹಿತ ಬಿ.ಶ್ರೀರಾಮುಲುಗೆ ಇದೇ ನನ್ನ ಅಕ್ಕರೆಯ ಹುಟ್ಟುಹಬ್ಬದ ಹಾರ್ದಿಕ ಶುಭಶಯಗಳು.
ನಿನ್ನ ನಲ್ಮೆಯ ಗೆಳೆಯ,
ಜಿ.ಜನಾರ್ದನ ರೆಡ್ಡಿ.

ತಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಎದೆಗುಂದದೇ ಸಹಾಯ ಮಾಡಿ ಮಾನಸಿಕವಾಗಿ ಸದೃಢಗೊಳಿಸಿದ ಗೆಳಯನಿಗೆ ಜರ್ನಾದನ ರೆಡ್ಡಿ ಅವರು ಮನದಾಳದ ಮಾತುಗಳನ್ನು ಹೇಳುವ ಮೂಲಕ ಶುಭಾಶಯ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *