ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ

Public TV
2 Min Read

ನವದೆಹಲಿ: ಸ್ಪೀಡ್ ಪೋಸ್ಟ್ ಮೂಲಕ ಮೂರು ಬಾರಿ ತಲಾಖ್ ಹೇಳಿದ್ದ ಗಂಡನ ವಿರುದ್ಧ ಹೋರಾಡಲು ಸುಪ್ರೀಂ ಮೊರೆ ಹೋಗಿದ್ದ ಮಹಿಳೆಯೊಬ್ಬರಿಂದ ಈಗ ಮುಸ್ಲಿಮ್ ಧರ್ಮದಲ್ಲಿದ್ದ ತಲಾಖ್ ದೇಶದಲ್ಲಿ ರದ್ದಾಗಿದೆ.

ಹೌದು. ತಲಾಖ್ ನಿಷೇಧವಾಗಬೇಕೆಂದು ಹಲವು ಮಂದಿ ಹೇಳುತ್ತಿದ್ದರೂ ಸುಪ್ರೀಂ ಕೋರ್ಟ್ ನಲ್ಲಿ ಮುಸ್ಲಿಮ್ ಮಹಿಳೆಯರು ಯಾರು ಅರ್ಜಿ ಸಲ್ಲಿಸರಲಿಲ್ಲ. ಆದರೆ 2016ರ ಫೆಬ್ರವರಿಯಲ್ಲಿ ಉತ್ತರಾಖಂಡದ ಶಾಯರಾ ಬಾನು ಕೋರ್ಟ್ ಮೊರೆ ಹೋಗಿ ಈ ಅನಿಷ್ಟ ಪದ್ದತಿಯನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ಬೆನ್ನಲ್ಲೆ ಮತ್ತೆ 6 ಅರ್ಜಿಗಳು ಸಲ್ಲಿಕೆಯಾಗಿತ್ತು. ಸಲ್ಲಿಕೆಯಾದ ಒಟ್ಟು 7 ಅರ್ಜಿಗಳಲ್ಲಿ ತಲಾಖ್ ನಿಷೇಧಿಸುವಂತೆ 5 ಮಂದಿ ಮಹಿಳೆಯರು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‍ನ ಸಾಂವಿಧಾನಿಕ ಪೀಠ ತ್ರಿವಳಿ ತಲಾಖ್‍ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಮಂಗಳವಾರ ಐತಿಹಾಸಿಕ ತೀರ್ಪು ಪ್ರಕಟಿಸಿ ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿದೆ.

ಏನಿದು ಶಾಯರಾ ಬಾನು ಪ್ರಕರಣ?
ಉತ್ತರಾಖಂಡ್ ಮೂಲದ ಶಾಯರಾ ಬಾನು 2002ರಲ್ಲಿ ಉತ್ತರಪ್ರದೇಶದ ಅಲಹಾಬಾದ್ ನಲ್ಲಿರುವ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ರಿಜ್ವನ್ ಅಹ್ಮದ್ ನನ್ನು ಮದುಯವೆಯಾಗುತ್ತಾರೆ. 2002ರಿಂದಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ 2015ರ ಅಕ್ಟೋಬರ್ ನಲ್ಲಿ ಸ್ಪೀಡ್ ಪೋಸ್ಟ್ ಕಳುಹಿಸಿ ತಲಾಖ್ ನೀಡಿದ್ದ. ಸ್ಪೀಡ್ ಪೋಸ್ಟ್ ನೋಡಿ ಶಾಕ್ ಆಗಿದ್ದ ಶಾಯರಾ ಬಾನು ಈ ವಿಚಾರವನ್ನು ಪರಿಚಯಸ್ಥ ಮೌಲ್ವಿಗೆ ತಿಳಿಸುತ್ತಾರೆ. ಆದರೆ ಮೌಲ್ವಿ ತಲಾಖ್ ನೀಡಿದ ಬಳಿಕ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಇರ್ಫಾನ್(13), ಮುಸ್ಕನ್(11)ನೊಂದಿಗೆ ತಾಯಿ ಮನೆಯಲ್ಲಿ ವಾಸವಾಗಿದ್ದ ಶಾಯರಾ ಪತಿ ವಿರುದ್ಧ ಹೋರಾಡಲು ಮುಂದಾಗುತ್ತಾರೆ. ಅಂತಿಮವಾಗಿ 2016ರ ಫೆಬ್ರವರಿ 23ರಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ.

ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಪ್ರತಿಕ್ರಿಯಿಸಿದ ಅವರು, ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಮುಸ್ಲಿಮ್ ಮಹಿಳೆಯರ ಪಾಲಿಗೆ ಇದು ಐತಿಹಾಸಿಕ ದಿನ ಎಂದು ಹೇಳಿದ್ದರು.

ಗಂಡ ತಲಾಖ್ ನೀಡಿದ್ದರ ಜೊತೆ ನಾನು ಆರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ. ಗರ್ಭಪಾತ ಮಾಡಿಸಿಕೊಳ್ಳದೇ ಇದ್ದರೆ ನನ್ನು ಹತ್ಯೆ ಮಾಡುವುದಾಗಿ ಪತಿ ಕಡೆಯವರು ಜೀವ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ.

ಯಾಕೆ ಈ ಅರ್ಜಿಗೆ ಮಹತ್ವ?
2015ರ ಅಕ್ಟೋಬರಿನಲ್ಲಿ ಹಿಂದೂ ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣವೊಂದರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತಿತ್ತು. ಈ ವೇಳೆ ಮುಸ್ಲಿಮ್ ಮಹಿಳೆಯರಿಗೂ ಶೋಷಣೆ ಆಗುತ್ತಿದೆ ಎನ್ನುವ ವಾದ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಶೋಷಣೆ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. 2015ರಲ್ಲಿ ಬಿಜೆಪಿ ವಕೀಲರೊಬ್ಬರು ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುತ್ತಾರೆ. ಈ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ವಿಚ್ಛೇದಿತ ಮಹಿಳೆಯೊಬ್ಬರು ತ್ರಿವಳಿ ತಲಾಖ್‍ನಿಂದ ತನ್ನ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿ ಸಲ್ಲಿಸಿದರೆ ಬೇಕಾದರೆ ಮುಂದೆ ಪರಿಶೀಲಿಸಬಹುದು. ಸಮಾನ ನಾಗರಿಕ ಸಂಹಿತೆ ಜಾರಿ ಕೋರ್ಟ್ ಕೆಲಸವಲ್ಲ ಎಂದು ಹೇಳಿತ್ತು. ಕೋರ್ಟಿನ ಈ ಆದೇಶದ ನಂತರ ಶಾಯರಾ ಬಾನು ಅರ್ಜಿ ಸಲ್ಲಿಸಿ ತಲಾಖ್ ನಿಷೇಧಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು

Share This Article
Leave a Comment

Leave a Reply

Your email address will not be published. Required fields are marked *