ಭಿನ್ನ ಭಾಷೆ, ಸಂಸ್ಕೃತಿ, ಆಚರಣೆಗಳಿಗೆ ಹೆಸರಾದ ದೇಶ ಭಾರತ. ದೇಶದಲ್ಲಿ ಒಂದು ನೆಲೆಯಿಂದ ಮತ್ತೊಂದು ನೆಲೆಗೆ ವೈಶಿಷ್ಟ್ಯ, ವೈವಿಧ್ಯತೆಯಿರುತ್ತದೆ. ಹಬ್ಬಗಳ ವಿಚಾರದಲ್ಲೂ ಜನರು ತಮ್ಮದೇ ಆದ ಆಚರಣೆಗಳನ್ನು ರೂಢಿಸಿಕೊಂಡಿರುತ್ತಾರೆ. ಭಾರತದಂತಹ ನೆಲದಲ್ಲಿ ಪ್ರಕೃತಿಗೂ ಹಬ್ಬಗಳಿಗೂ ವಿಶೇಷ ನಂಟು. ಪ್ರಕೃತಿ ಋತುಗಳಿಗೆ ಅನುಗುಣವಾಗಿ ಹಬ್ಬಗಳ ಆಚರಣೆ ಇರುತ್ತದೆ. ಭಾರತದ ಪ್ರಮುಖ ಹಿಂದೂ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೇಶ-ವಿದೇಶಗಳಲ್ಲಿ ಈ ಹಬ್ಬವನ್ನು ಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ (Tamil Nadu) ದೀಪಾವಳಿ (Deepavali) ಸಂಭ್ರಮದ ಮುಕ್ತಾಯವನ್ನು ಗುರುತಿಸಲು ಸಗಣಿ ಎಸೆಯುವ ಹಬ್ಬವಾಗಿ ಆಚರಿಸುತ್ತಾರೆ. ಈ ಹಬ್ಬ ತನ್ನದೇ ಆದ ಇತಿಹಾಸ, ಸ್ಥಳೀಯ ಆಚರಣೆಗಳ ಸೊಗಡನ್ನು ಹೊಂದಿದೆ.
ಸಗಣಿ ಎಸೆಯುವ ಹಬ್ಬ
ದೀಪಾವಳಿ ಮುಕ್ತಾಯವನ್ನು ಗುರುತಿಸಲು ಹಳ್ಳಿಯೊಂದರ ಸ್ಥಳೀಯ ಆಚರಣೆ ಇದು. ಗ್ರಾಮಸ್ಥರೆಲ್ಲ ಒಂದುಕಡೆ ಸೇರಿ ಸಂತೋಷದ ಕೂಟವನ್ನು ಏರ್ಪಡಿಸುತ್ತಾರೆ. ಅಲ್ಲಿ ಪರಸ್ಪರರು ಮುಷ್ಟಿ ತುಂಬ ಹಸುವಿನ ಸಗಣಿಯನ್ನು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ. ಈ ವಿಶಿಷ್ಟ ಹಬ್ಬಕ್ಕೆ 300 ವರ್ಷಗಳ ಇತಿಹಾಸವಿದೆ. ಊರಿನವರು ದೀಪಾವಳಿಯ ನಂತರದ ನಾಲ್ಕನೇ ದಿನದಂದು ದನಗಳ ಸಗಣಿ ಎಸೆಯುವ ಹಬ್ಬವಾಗಿ ಇದನ್ನು ಆಚರಿಸುತ್ತಾರೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಸಂಭ್ರಮ
ಸಗಣಿ ಎಸೆದಾಡುವ ಹಬ್ಬಕ್ಕೆ ‘ಗೋರೆಹಬ್ಬ’ ಎಂದು ಕರೆಯುತ್ತಾರೆ. ತಮಿಳುನಾಡಿನ ಈರೋಡ್ ಜಿಲ್ಲೆಯ ತಲವಾಡಿ (Thalavadi) ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಈ ಗ್ರಾಮ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿದೆ. ಸ್ಥಳೀಯ ಹಬ್ಬವನ್ನು ಬೀರೇಶ್ವರರ್ ದೇವಾಲಯದಲ್ಲಿ ಆಚರಿಸುತ್ತಾರೆ. ತಲವಾಡಿಯಾದ್ಯಂತ ಗ್ರಾಮಸ್ಥರು ದನಗಳ ಸಗಣಿಯನ್ನು ಸಂಗ್ರಹಿಸುತ್ತಾರೆ. ಅದನ್ನು ಟ್ರ್ಯಾಕ್ಟರ್‌ಗಳಿಂದ ತಂದು ಗುಂಡಿಯೊAದರಲ್ಲಿ ಸುರಿಯುತ್ತಾರೆ. ಬೀರೇಶ್ವರರ್ ದೇವಾಲಯದ ಕೊಳದಲ್ಲಿ ಧಾರ್ಮಿಕ ಕಾರ್ಯಗಳ ನಂತರ ಗ್ರಾಮಸ್ಥರು ಈ ಗುಂಡಿಗೆ ಹಾರಿ ಪರಸ್ಪರರ ಮೇಲೆ ಸಗಣಿ ಎಸೆಯುತ್ತಾರೆ.
ಈ ಹಬ್ಬ ಆಚರಣೆ ಏಕೆ?
ಸಗಣಿ ಎಸೆಯುವ ಹಬ್ಬದ ಸುತ್ತ ಹಲವು ಆಚರಣೆ ಮತ್ತು ನಂಬಿಕೆಗಳಿವೆ. ಇದು ಕೃಷಿ ಸಮೃದ್ಧಿಯನ್ನು ತರುತ್ತದೆ ಎಂದು ಜನರು ನಂಬಿದ್ದಾರೆ. ಸಗಣಿ ಸಂಗ್ರಹಿಸುವ ಗುಂಡಿಯಲ್ಲಿ ಒಮ್ಮೆ ಶಿವಲಿಂಗ ಇತ್ತು ಎಂದು ನಂಬಲಾಗಿದೆ. ಸಗಣಿ ಎಸೆಯುವ ಹಬ್ಬದಲ್ಲಿ ಪಾಲ್ಗೊಂಡರೆ, ಯಾವುದೇ ಕಾಯಿಲೆಯಿದ್ದರೂ ಬೇಗ ಗುಣವಾಗುತ್ತದೆ ಎನ್ನುತ್ತಾರೆ ಇಲ್ಲಿಯ ಜನರು. ಸಗಣಿ ಸಂಗ್ರಹಿಸುವ ಜಾಗ ಶತಮಾನಗಳಿಂದ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತಿದೆ.
ದೇಶದ ನಾನಾ ಭಾಗಗಳಿಂದ ಬರುತ್ತಾರೆ ಜನ
ಪ್ರತಿ ವರ್ಷ ಈ ಆಚರಣೆಯನ್ನು ವೀಕ್ಷಿಸಲು ಭಾರತದ ವಿವಿಧ ಭಾಗಗಳಿಂದ ಜನರು ಈ ಗ್ರಾಮಕ್ಕೆ ಬರುತ್ತಾರೆ. ಸಗಣಿ ಎಸೆಯುವುದನ್ನು ನೋಡುವುದರಿಂದಲೂ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲೂ ‘ಗೋರೆಹಬ್ಬ ಹಬ್ಬ’ವನ್ನು ಆಚರಿಸಲಾಗಿತ್ತು. ಸ್ಥಳೀಯ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ಜನರು ಕೂಡ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಗ್ರಾಮೀಣ ಭಾರತದಲ್ಲಿ ಹಸುವಿನ ಸಗಣಿ ಹಲವಾರು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಪರ್ಯಾಯ ಇಂಧನವಾಗಿ ಜನರು ಬಳಕೆ ಮಾಡುತ್ತಾರೆ. ಹಬ್ಬ ಆಚರಣೆ ಬಳಿಕ ನೆರೆಯ ಹಳ್ಳಿಗಳಲ್ಲಿ ಕೃಷಿ ಪ್ರಯೋಜನಗಳಿಗೆ ಸಗಣಿಯನ್ನು ಜನ ತೆಗೆದುಕೊಳ್ಳುತ್ತಾರೆ. ಬೆಳೆಗಳಿಗೆ ಗೊಬ್ಬರವಾಗಿ ಬಳಸುತ್ತಾರೆ. ಈ ಪದ್ಧತಿಯು ವರ್ಷಪೂರ್ತಿ ಅವರ ಕೃಷಿ ಇಳುವರಿಯನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಜನರು ನಂಬಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಗುಮಟಪುರ ಗ್ರಾಮದಲ್ಲೂ ಇದೇ ರೀತಿಯ ಸಂಪ್ರದಾಯವನ್ನು ಆಚರಿಸಲಾಗುತ್ತದೆ.