2018ರ ಸ್ವಾತಂತ್ರ್ಯ ಭಾಷಣ ಮೋದಿಯ ಮೂರನೇ ದೀರ್ಘ ಭಾಷಣ

Public TV
2 Min Read

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ದೆಹಲಿ ಕೆಂಪು ಕೋಟೆ ಮೇಲೆ ಇಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ್ದು, ಬಳಿಕ ಮಾಡಿದ ಭಾಷಣವು ಮತ್ತೊಂದು ದಾಖಲೆ ಬರೆದಿದೆ. ಮೋದಿ ತಮ್ಮ ಅಧಿಕಾರ ಅವಧಿಯ ಐದನೇ ಭಾಷಣ ಇದಾಗಿದ್ದು, ಇಂದು 82 ನಿಮಿಷ ಮಾತನಾಡಿದ್ದಾರೆ.

2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ಸರ್ಕಾರದ ಕೊನೆಯ ಭಾಷಣ ಕೂಡಾ ಆಗಿದ್ದು, ಕೇಂದ್ರ ಸರ್ಕಾರದ ಅನೇಕ ಯೋಜನೆ, ಸಾಧನೆಗಳನ್ನು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಸ್ಥಾನ ಹೆಚ್ಚುತ್ತಿರುವ ಬಗ್ಗೆ ಮೋದಿ ವಿವರಿಸಿದ್ದಾರೆ.

2016ರಲ್ಲಿ ನರೇಂದ್ರ ಮೋದಿ 96 ನಿಮಿಷಗಳ ಭಾಷಣ ಮಾಡಿದ್ದು, ಇದು ಭಾರತ ಇತಿಹಾಸದಲ್ಲಿಯೇ ದೀರ್ಘ ಭಾಷಣವಾಗಿದೆ. 2017ರಲ್ಲಿ 57 ನಿಮಿಷ ಮಾತನಾಡಿದ್ದು ಇದು ಅವರ ಅತ್ಯಂತ ಕಡಿಮೆ ಸಮಯದ ಭಾಷಣವಾಗಿದೆ. 2014ರಲ್ಲಿ 65 ನಿಮಿಷ ಹಾಗೂ 2015ರಲ್ಲಿ 86 ನಿಮಿಷ ಭಾಷಣ ಮಾಡಿದ್ದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2005 ಮತ್ತು 2006 ರಲ್ಲಿ 50 ನಿಮಿಷ ಭಾಷಣ ಮಾಡಿದ್ದರು. ಅವರ 10 ವರ್ಷದ ಅಧಿಕಾರ ಅವಧಿಯಲ್ಲಿ ಈ ಎರಡು ಭಾಷಣ ಬಿಟ್ಟರೆ ಉಳಿದ 8 ವರ್ಷ 32 ರಿಂದ 45 ನಿಮಿಷದಲ್ಲಿ ಭಾಷಣ ಮುಗಿಸಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಧಿಕಾರ ಅವಧಿಯಲ್ಲಿ ಸಾಮಾನ್ಯವಾಗಿ 30 ರಿಂದ 35 ನಿಮಿಷ ಭಾಷಣ ಮಾಡುತ್ತಿದ್ದರು. 2002ರಲ್ಲಿ 25 ನಿಮಿಷ ಭಾಷಣ ಮಾಡಿದರೆ, 2003ರಲ್ಲಿ 30 ನಿಮಿಷಗಳ ದೀರ್ಘ ಭಾಷಣದಲ್ಲಿ 17 ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಬಗ್ಗೆ ವಿವರಿಸಿದ್ದರು.

ಪ್ರಥಮ ಪ್ರಧಾನಿ ಜವಹಾರ್ ಲಾಲ್ ನೆಹರು ಸ್ವಾತಂತ್ರ್ಯ ಭಾರತದ ಮೊದಲ ಭಾಷಣದಲ್ಲಿ 72 ನಿಮಿಷ ದೀರ್ಘ ಭಾಷಣ ಮಾಡಿದ್ದರು. ಅಲ್ಲಿಂದ 2015ರ ವರೆಗೆ ಯಾವುದೇ ಪ್ರಧಾನಿಗಳು ನೆಹರು ಭಾಷಣದ ದಾಖಲೆಯನ್ನು ದಾಟಿರಲಿಲ್ಲ. ಆದರೆ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೊದಲ ಸ್ವಾತಂತ್ರ್ಯ ಭಾಷಣದಲ್ಲಿಯೇ 86 ನಿಮಿಷ ಭಾಷಣ ಮಾಡಿ, ದೀರ್ಘ ಭಾಷಣ ಮಾಡಿದ ಪ್ರಧಾನಿ ದಾಖಲೆಯನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದರು.

ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಾನು ದೀರ್ಘ ಭಾಷಣ ಮಾಡುತ್ತೇನೆ. ಹೀಗಾಗಿ ಭಾಷಣದ ಅವಧಿಯನ್ನು ಕಡಿಮೆ ಮಾಡುವಂತೆ ಹಲವು ಮಂದಿ ಪತ್ರ ಬರೆದು ದೂರು ನೀಡಿದ್ದಾರೆ. ಈ ಕಾರಣಕ್ಕಾಗಿ ನನ್ನ ಭಾಷಣದ ಅವಧಿಯನ್ನು ಕಡಿತಗೊಳಿಸುತ್ತೇನೆ ಎಂದು ಕಳೆದ ವರ್ಷದ ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *