ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

Public TV
2 Min Read

ನವದೆಹಲಿ: 1983 ಜೂನ್ 25 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನು ಈ ದಿನ ಸೃಷ್ಟಿಸಿತ್ತು.

ಇಂದಿಗೆ ಭಾರತ ತಂಡ ಈ ಸಾಧನೆ ಮಾಡಿ 36 ವರ್ಷವಾಗಿದೆ. ಇಂಗ್ಲೆಂಡಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ವಿಶ್ವಕಪ್‍ನ್ನು ಗೆದ್ದು ಬೀಗಿತ್ತು. ಆ ಕಾಲಕ್ಕೆ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ದೈತ್ಯ ವಿಂಡೀಸ್ ಪಡೆಯ ವಿರುದ್ಧ ಭಾರತ 43 ರನ್‍ಗಳ ಅಂತರದಲ್ಲಿ ಗೆಲುವು ಪಡೆದಿತ್ತು.

ಅಂದು ಮೊದಲು ಟಾಸ್ ಗೆದ್ದು ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ರಾಬಟ್ರ್ಸ್, ಮಾರ್ಶಲ್, ಗಾರ್ನರ್, ಹೋಲ್ಡಿಂಗ್‍ನಂತಹ ಘಟಾನುಘಟಿ ಬೌಲರ್‍ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ಕೇವಲ 54.4 ಓವರ್ ಗಳಲ್ಲಿ 183 ರನ್ ಗಳಿಸಿ ಅಲೌಟ್ ಆಗಿತ್ತು. ಇದರಲ್ಲಿ ಭಾರತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಮಾತ್ರ 57 ಎಸೆತಗಳನ್ನು ಆಡಿ 38 ರನ್ ಗಳಿಸಿದ್ದರು. ಇದನ್ನು ಬಿಟ್ಟರೆ ನಾಯಕ ಕಪಿಲ್ ದೇವ್, ಕೀರ್ತಿ ಆಜಾದ್, ರೋಜರ್ ಬಿನ್ನಿ ಬ್ಯಾಟಿಂಗ್‍ನಲ್ಲಿ ವಿಫಲರಾಗಿದ್ದರು.

ಈ ಸುಲಭ ಗುರಿಯನ್ನು ಬೆನ್ನಟ್ಟಿದ್ದ ವಿಂಡೀಸ್ ತಂಡಕ್ಕೆ ಬಹುದೊಡ್ಡ ಶಾಕ್ ಕಾದಿತ್ತು. ಭಾರತೀಯ ಬೌಲರ್‍ಗಳಾದ ಮೊಹಿಂದರ್ ಅಮರ್‍ನಾಥ್ ಮತ್ತು ಮದನ್ ಲಾಲ್ ಮಾರಕ ದಾಳಿಗೆ ಬಲಿಷ್ಠ ವಿಂಡೀಸ್ ಪಡೆ ನಲುಗಿ ಹೋಗಿತ್ತು. 7 ಓವರ್ ಬೌಲ್ ಮಾಡಿದ ಅಮರ್‍ನಾಥ್ 12 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮದನ್ ಲಾಲ್ 31 ರನ್ ನೀಡಿ 3 ವಿಕೆಟ್ ಬಲಿ ಪಡೆದು ವಿಂಡೀಸ್ ಆಟಗಾರಿಗೆ ಪೆವಿಲಿಯನ್ ದಾರಿ ತೋರಿಸಿದ್ದರು.

ಕಪಿಲ್ ಕ್ಯಾಚ್ ಭಾರತಕ್ಕೆ ಟ್ರೋಫಿ:
ಒಂದು ಉತ್ತಮ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ ಎನ್ನುವ ಮಾತಿಗೆ ಪೂರಕ ಎಂಬಂತೆ 28 ಎಸೆತದಲ್ಲಿ 33 ರನ್ ಗಳಿಸಿ ಗೆಲುವಿನ ದಡಕ್ಕೆ ಮುನ್ನಡೆಸುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟಿಗ ವಿವಿಯನ್  ರಿಚರ್ಡ್ಸ್ ಬಾರಿಸಿದ ಚೆಂಡನ್ನು ಕಪಿಲ್ ಹಿಮ್ಮುಖವಾಗಿ ಓಡಿ ಕ್ಯಾಚ್ ಹಿಡಿದ್ದಿದ್ದರು. ಈ ಮೂಲಕ ಭಾರತ ತಂಡವನ್ನು ಮೊದಲ ವಿಶ್ವಕಪ್ ಕಡೆಗೆ ಕರೆದುಕೊಂಡು ಹೋಗಿದ್ದರು.

ಎರಡು ಬಾರಿ ಗೆದಿದ್ದ ವೆಸ್ಟ್ ಇಂಡೀಸ್‍ನ ಗೆಲುವಿನ ಓಟಕ್ಕೆ ಭಾರತ ಪೂರ್ಣ ವಿರಾಮ ಹಾಕಿತು. 184 ರನ್ ಬೆನ್ನಟ್ಟಿದ ವಿಂಡೀಸ್ 140 ರನ್‍ಗಳಿಗೆ ಪತನ ಹೊಂದಿತ್ತು. ಈ ಮೂಲಕ ಭಾರತ 42 ರನ್‍ಗಳ ಜಯ ದಾಖಲಿಸಿ ತನ್ನ ಮೊದಲ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *