ಈ ರಕ್ತ ಪರೀಕ್ಷೆಯಿಂದ 12 ಗಂಟೆಯಲ್ಲೇ ಪತ್ತೆಯಾಗುತ್ತೆ HIV – ರಕ್ತದ ಮೇಲೆ ನಡೆಸುವ ಪರೀಕ್ಷೆಗಳು ಯಾವುವು?

6 Min Read

ಮನುಷ್ಯ ಯಾರೇ ಆಗಿರಲಿ, ಎಲ್ಲೇ ಇರಲಿ ಎಲ್ಲರ ದೇಹದಲ್ಲೂ ಇರುವುದು ಒಂದೇ ರಕ್ತ, ಅಪಘಾತ, ಕ್ಯಾನ್ಸರ್, ಹೃದಯಸಂಬಂಧಿ ಸಮಸ್ಯೆಗಳು, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತದ ಅಗತ್ಯವಿರುತ್ತದೆ. ಅದಕ್ಕಾಗಿಯೇ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜೂ.14 ರ ದಿನವನ್ನ ʻವಿಶ್ವ ರಕ್ತದಾನಿಗಳ ದಿನʼವನ್ನಾಗಿ ಆಚರಿಸಲಾಗುತ್ತದೆ.

ಭಾರತದಲ್ಲಿ ವರ್ಷಕ್ಕೆ ಸುಮಾರು 1.46 ಕೋಟಿ ಯೂನಿಟ್‌ ನಷ್ಟು ರಕ್ತವು ಬೇಕಾಗುತ್ತಿದೆ. ರಕ್ತದ ಬೇಡಿಕೆ ಮತ್ತು ಪೂರೈಕೆಯೂ ಹೆಚ್ಚಾದಂತೆ ರಕ್ತದ ಅವಶ್ಯಕತೆಯೂ ಹೆಚ್ಚುತ್ತಿದೆ. 2024-25 ರ ಸಾಲಿನಲ್ಲಿ ಭಾರತದಲ್ಲಿ 1.46 ಕೋಟಿ ಯೂನಿಟ್‌ ರಕ್ತ ಪೂರೈಕೆಯಾಗಿದೆ. ಇದು 2023-24ರ ವರ್ಷಕ್ಕಿಂತಲೂ 15% ಹೆಚ್ಚಾಗಿದೆ. ಹಾಗೆಯೇ ವಿಶ್ವದಾದ್ಯಂತ ಪ್ರತಿ ವರ್ಷ 11 ರಿಂದ 12 ಕೋಟಿ ಯೂನಿಟ್‌ನಷ್ಟು ರಕ್ತ ಬೇಕಾಗುತ್ತಿದೆ.

Blood sample positive with Measles virus

ರಕ್ತದ ಕೊರತೆಯಿದ್ದ ಮಾತ್ರಕ್ಕೆ ದಾನಿಗಳು ನೀಡಿದ ರಕ್ತವನ್ನು ಹಾಗೇ ಕೊಡಲು ಸಾಧ್ಯವಾಗದು, ಸುರಕ್ಷಿತ ಮತ್ತು ಪರಿಶುದ್ಧವಾಗಿಯೇ ಇದೆ ಎಂದು ಪರಿಶೀಲಿಸಿದ ಬಳಿಕವಷ್ಟೇ ಅದನ್ನ ರೋಗಿಗಳಿಗೆ ನೀಡಲಾಗುತ್ತದೆ. ಇಲ್ಲದಿದ್ದರೆ, ಮಾರಕ ಕಾಯಿಲೆಗಳು ಬರುವ ಅಥವಾ ಜೀವವೇ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದಕ್ಕೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ದುರಂತವೇ ಸಾಕ್ಷಿಯಾಗಿದೆ. ಅಷ್ಟಕ್ಕೂ ಮಧ್ಯಪ್ರದೇಶದಲ್ಲಿ ಏನಾಗಿತ್ತು? ರಕ್ತದಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ಕರ್ನಾಟಕದಲ್ಲಿ ರಕ್ತದಾನ ವ್ಯವಸ್ಥೆ ಹೇಗಿದೆ? ಯಾವ ಯಾವ ವಿಧಾನಗಳನ್ನ ರಕ್ತ ಪರೀಕ್ಷೆಗೆ ಬಳಸಲಾಗುತ್ತದೆ? ಮಾರಕ ಕಾಯಿಲೆಯಿದ್ದರೆ ಹೇಗೆ ತಿಳಿಯುತ್ತದೆ? ಎಂಬುದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

Madhya Pradesh HIV

ಮಧ್ಯಪ್ರದೇಶದಲ್ಲಿ ಆಗಿದ್ದೇನು?
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ (Satna Hospital) ವೈದ್ಯರೇ ಭಾರೀ ಯಡವಟ್ಟು ಮಾಡಿದ್ದರು. ಥಲಸ್ಸೆಮಿಯಾದಿಂದ (Thalassemia) ಬಳಲುತ್ತಿದ್ದ 15 ವರ್ಷದೊಳಗಿನ 6 ಮಕ್ಕಳಿಗೆ ದಾನಿಗಳಿಂದ ಪಡೆದ ರಕ್ತ ಕೊಡುವಾಗ ಅನಾಹುತ ಮಾಡಿದ್ದರು. ರಕ್ತ ಪಡೆದಿದ್ದ 6 ಮಕ್ಕಳಿಗೂ ಹೆಚ್‌ಐವಿ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಭಾರೀ ಕಳವಳ ವ್ಯಕ್ತವಾಗಿತ್ತು. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆದ್ರೆ ಘಟನೆ ಬಳಿಕ ಕರ್ನಾಟಕದಲ್ಲೂ ರಕ್ತನಿಧಿ ಕೇಂದ್ರಗಳು ಅಲರ್ಟ್‌ ಆಗಿವೆ. ಮೂರ್ನಾಲ್ಕು ಹಂತಗಳಲ್ಲಿ ದಾನಿಗಳ ರಕ್ತ ಪರೀಕ್ಷೆ ಮಾಡಿದ ಬಳಿಕ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

HIV

ರಕ್ತದಾನದಿಂದಾಗುವ ಪ್ರಯೋಜನಗಳೇನು?
* ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ತೊಂದರೆಗಳನ್ನ ಕಡಿಮೆ ಮಾಡುತ್ತದೆ.
* ರಕ್ತದಾನದಿಂದ ಹೊಸ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗಿ ದೇಹವು ಹೊಸ ರಕ್ತವನ್ನು ಉತ್ಪಾದಿಸುತ್ತದೆ.
* ರಕ್ತದಾನವು ಅಂಗಾಂಗಗಳಲ್ಲಿ ಅನವಶ್ಯಕ ಕೊಬ್ಬಿನಾಂಶ ಕ್ರೋಢೀಕರಣ ಆಗುವುದನ್ನ ತಪ್ಪಿಸುತ್ತದೆ.
* ದೇಹದಲ್ಲಿನ ಕ್ಯಾಲೋರಿಗಳನ್ನ ಕಡಿಮೆ ಮಾಡುತ್ತದೆ.
* ವಿಶೇಷವಾಗಿ ವಯಸ್ಕರಲ್ಲಿ ಮರುಚೈತನ್ಯ ತುಂಬುತ್ತದೆ.
* ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತ ಪರಿಶೀಲನೆಯೂ ನಿಯಮಿತವಾಗಿ ಆಗುತ್ತದೆ.

ರಕ್ತದಾನಕ್ಕೂ ಮುನ್ನ ನಡೆಯುವ ದೈಹಿಕ ಪರೀಕ್ಷೆಗಳು ಯಾವುದು?
* ಮೊದಲು ತೂಕ ಪರಿಶೀಲಿಸಲಾಗುತ್ತದೆ. ನಂತರ,
* ಹಿಮೊಗ್ಲೋಬಿನ್ ಅಂದಾಜು ಮಾಡಲಾಗುತ್ತದೆ (12.5 ಗ್ರಾಂ/100 ಎಂಎಲ್)
* ರಕ್ತದೊತ್ತಡ (ಹೈ ಬಿಪಿ ಅಥವಾ ಲೋ ಬಿಪಿ) ಪರೀಕ್ಷೆ ನಡೆಸಲಾಗುತ್ತದೆ (ಸಂಕೋಚನ (systelic) 160/100 mmHg; ವ್ಯಕೋಚನ (diastolic) 90/60 mmHg)
* ಹೃದಯ ಬಡಿತದ ಪರೀಕ್ಷೆ (ನಿಮಿಷಕ್ಕೆ 60-100 ಬಡಿತ), ಯಕೃತ್ತು, ಶ್ವಾಸಕೋಶದ ಸ್ಥಿತಿ
* ದೇಹದ ತಾಪಮಾನ ಪರೀಕ್ಷಿಸಲಾಗುತ್ತದೆ.

ಸ್ವಯಂ ಪ್ರೇರಿತ ರಕ್ತದಾನ ಮಾಡುವುದು ಒಳ್ಳೆಯದೇ?
ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ರಕ್ತ ಹಂಚಿಕೆಗಾಗಿ ತನ್ನ ದೇಹದಿಂದ ರಕ್ತವನ್ನ ಹೊರತೆಗೆದಾಗ ರಕ್ತದಾನವೆಂದು ಹೇಳಲಾಗುತ್ತದೆ. ದಾನ ನೀಡಿದ ರಕ್ತವನ್ನು ರಕ್ತದ ಅಗತ್ಯವಿರುವ ರೋಗಿಗಳಿಗೆ ವರ್ಗಾಯಿಸಲಾಗುತ್ತದೆ. ರೋಗಿಗಳಿಗೆ ರಕ್ತ ವರ್ಗಾವಣೆ ಮಾಡೋದಕ್ಕೂ ಮುನ್ನ ಅವರ ರಕ್ತವು ಸುರಕ್ಷಿತವಾಗಿದೆಯೇ? ಇಲ್ಲವೇ? ಎಂದು ಪರೀಕ್ಷಿಸಲಾಗುತ್ತದೆ. ಹೆಚ್‌ಐವಿ ಮತ್ತು ಹೆಪಟೈಟಿಸ್‌ ನಂತಹ ರಕ್ತ ಪರೀಕ್ಷೆಗಳನ್ನ ನಡೆಸಲಾಗುತ್ತದೆ. ನಂತರ ದಾನ ಮಾಡಿದವರು ಹಾಗೂ ದಾನ ಮಾಡುವವರು ರಕ್ತದಾನ ಮಾಡೋದ್ರಿಂದ ತಮಗೆ ತೊಂದರೆ ಆಗುತ್ತದೆಯೋ ಇಲ್ಲವೋ ಅನ್ನೋದನ್ನ ತಿಳಿಯಲು ದೈಹಿಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಯಾರು ರಕ್ತದಾನ ಮಾಡಬಹುದು?
ಸಾಮಾನ್ಯವಾಗಿ ಎಲ್ಲರೂ ರಕ್ತದಾನ ಮಾಡಬಹುದು. 18 ರಿಂದ 60 ವರ್ಷದೊಳಗಿನ ಹಾಗೂ 45 ಕೆಜಿ ಗಿಂತ ಹೆಚ್ಚು ತೂಕ ಹೊಂದಿದ ಆರೋಗ್ಯ ವಂತರೆಲ್ಲರೂ ರಕ್ತದಾನ ಮಾಡಬಹುದು. ಆರೋಗ್ಯವಂತ ಪುರುಷರು 3 ತಿಂಗಳಿಗೊಮ್ಮೆ ಹಾಗೂ ಆರೋಗ್ಯವಂತ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಯಾರು ರಕ್ತದಾನ ಮಾಡಬಾರದು?
ಅನಾರೋಗ್ಯವಿದ್ದಾಗ, ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡಿದ್ದರೆ ರಕ್ತದಾನ ಮಾಡಬಾರದು. ಮಹಿಳೆಯರು ಋತುಸ್ರಾವದ ಸಮಯದಲ್ಲಿ, ಗರ್ಭಿಣಿಯಾಗಿದ್ದಾಗ, ಎದೆ ಹಾಲುಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡುವಂತಿಲ್ಲ. ಯಾವುದೇ ವ್ಯಕ್ತಿ ಖಾಯಿಲೆ ವಿರುದ್ಧ ಲಸಿಕೆ ಪಡೆದಿದ್ದರೆ, ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ಹಾಗೂ ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಚಿಕಿತ್ಸೆ ಪಡೆದ ನಂತರದ 3 ತಿಂಗಳು, ಆಸ್ಪಿರಿನ್ ಮಾತ್ರೆ ಸೇವಿಸಿದ್ದರೆ, ಅಂತಹ ವ್ಯಕ್ತಿ ಮಾತ್ರೆ ಸೇವಿಸಿದ 3 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ.

ಇದಲ್ಲದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು 6 ತಿಂಗಳ ಕಾಲ ಮತ್ತು ಚಿಕ್ಕ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ 3 ತಿಂಗಳುಗಳ ಕಾಲ ರಕ್ತ ದಾನ ಮಾಡಬಾರದು. ಕಾಮಾಲೆ, ಹೆಚ್‌ಐವಿ, ಲೈಂಗಿಕ ರೋಗವಿರುವವರು, ಕ್ಯಾನ್ಸರ್, ಹೃದಯದ ಖಾಯಿಲೆ, ಅಸಹಜ ರಕ್ತಸ್ರಾವ, ಕಾರಣವಿಲ್ಲದೇ ತೂಕ ಕಡಿಮೆಯಾಗುವುದು, ಹೆಪಟೈಟಿಸ್ ಬಿ ಮತ್ತು ಸಿ, ಮೂತ್ರಪಿಂಡ ಹಾಗೂ ಯಕೃತ್ತಿಗೆ ಸಂಬಂಧಿಸಿದ ಖಾಯಿಲೆ, ಅಸ್ತಮಾ, ಮೂರ್ಛೆ ರೋಗ, ಮಾನಸಿಕ ರೋಗವಿರುವವರು ರಕ್ತದಾನ ಮಾಡಬಾರದು.

ಹೆಚ್‌ಐವಿ ಇದ್ದರೆ ಎಷ್ಟು ಗಂಟೆಯಲ್ಲಿ ತಿಳಿಯುತ್ತೆ?
ಮಾರುಕಟ್ಟೆಯಲ್ಲಿ ಸಿಗುವ ಕಿಟ್‌ಗಳನ್ನ ರಕ್ತ ಪರೀಕ್ಷೆಗೆ ಬಳಕೆ ಮಾಡೋದ್ರಿಂದ ಮಾರಣಾಂತಿಕ ಪರಿಣಾಮಗಳ ಬಗ್ಗೆ ತಿಳಿಯುವುದಿಲ್ಲ. ಆದ್ದರಿಂದ ಸೋಂಕು ಪತ್ತೆಗೆ ಸರ್ಕಾರ ಸೂಚಿಸಿರುವ ಎಲಿಸಾ, ಕ್ಲಿಯಾ, ನ್ಯಾಟ್‌ ಮಾದರಿ ಪರೀಕ್ಷೆಗಳನ್ನ ರಕ್ತನಿಧಿ ಕೇಂದ್ರಗಳು ಅನುಸರಿಸಬೇಕು ಎಂದು ಮೈಸೂರಿನ ಜೀವಾಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮನವಿ ಮಾಡಿದ್ದಾರೆ.

ಏಕೆಂದ್ರೆ ಕಾರ್ಡ್‌ ಮೆಥೆಡ್‌ನಲ್ಲಿ ವಿಂಡೋ ಪೀರಿಯಡ್‌ನಲ್ಲಿ ಸೋಂಕು ಪತ್ತೆಯಾಗುವುದಿಲ್ಲ. ಎಲಿಸಾ ಮೆಥೆಡ್‌ನಲ್ಲಿ 15 ದಿನಗಳ ನಂತರ ಡಿಟೆಕ್ಟ್‌ ಆಗುತ್ತೆ. ಅದರ ಅಪ್‌ಗ್ರೇಡ್‌ ಕ್ಲಿಯಾ ಮೆಥೆಡ್‌ ರಕ್ತನಿಧಿ ಕೇಂದ್ರಗಳಲ್ಲಿ ಮಾಡಿದ್ರೆ ಒಳ್ಳೆಯದು. ಇದಕ್ಕಿಂತಲೂ ಅಪ್‌ಗ್ರೇಡ್‌ ಮೆಥೆಡ್‌ ಅಂದ್ರೆ ಅದು ನ್ಯಾಟ್‌, ಇದು ರಕ್ತ ಪರೀಕ್ಷೆಯ 12 ಗಂಟೆಯಲ್ಲೇ ಹೆಚ್‌ಐವಿ ಇದ್ದರೆ ಡಿಟೆಕ್ಟ್‌ ಆಗುತ್ತದೆ.

HIV

ರಕ್ತ ಪಡೆಯಲು ಹಣ ಸಂದಾಯ ಮಾಡುವುದು ಏಕೆ?
ಸ್ವಯಂ ಪ್ರೇರಿತ ರಕ್ತದಾನಿಯಿಂದ ಪಡೆದ ರಕ್ತವನ್ನ ಸಂಗ್ರಹಿಸಿ ಸಂರಕ್ಷಿಸಿ ರಕ್ತದ ಮಾದರಿ ಮತ್ತು ರಕ್ತದ ಮೂಲಕ ವರ್ಗಾಯಿಸಲ್ಪಡುವ ರೋಗ (ಕಾಯಿಲೆ) ಉದಾಹರಣೆಗೆ: ಹೆಚ್ಐವಿ, ಮಲೇರಿಯಾ, ಜಾಂಡಿಸ್ ಸಿಪಿಲಿಸ್ ಮುಂತಾದ ರೋಗಲಕ್ಷಣಗಳನ್ನ ಪರೀಕ್ಷಿಸಿ, ನಂತರ ರೋಗಿಯ ಮಾದರಿ ರಕ್ತದ ಜೊತೆಗೆ ಹೊಂದಾಣಿಕೆ ಪ್ರಕ್ರಿಯೆಯನ್ನ ನಡೆಸಿದ ನಂತರ ಸಂಬಂಧ ಪಟ್ಟ ರೋಗಿಗೆ ವಿತರಿಸಲಾಗುವುದು. ಈ ಎಲ್ಲಾ ಮೇಲ್ಕಂಡ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ನಿಗದಿ ಪಡಿಸಿರುವ ದರದಂತೆ ರಕ್ತ ನಿಧಿ ಕೇಂದ್ರದ ವತಿಯಿಂದ ಶುಲ್ಕವನ್ನು ಪಡೆಯಲಾಗುವುದು.

ಈ ಶುಲ್ಕವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಆದೇಶಾನುಸಾರವಾಗಿರುತ್ತದೆ, ಆದುದರಿಂದ ನಿಗದಿ ಪಡಿಸಿರುವ ದರವನ್ನು ಪಾವತಿ ಮಾಡಬೇಕಿರುವುದು ಸರ್ಕಾರದ ನಿಬಂಧನೆಯಾಗಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ 1,550 ರೂ. ನಿಗದಿಪಡಿಸಿದೆ.

ಪ್ರಯೋಗಾಲಯದಲ್ಲಿ ರಕ್ತದ ಮೇಲೆ ನಡೆಸುವ ಪರೀಕ್ಷೆಗಳು ಯಾವುವು?
ಹೆಚ್‌ಐವಿ ಪರೀಕ್ಷೆ, ಕಾಮಾಲೆ ರೋಗ, (ಹೆಪಟೈಟಿಸ್‌ ಬಿ ಮತ್ತು ಸಿ), ಲೈಂಗಿಕ ರೋಗಗಳು, ಮಲೇರಿಯಾ, ರಕ್ತದ ಗುಂಪು, ಸಿಫಿಲಿಸ್‌ ಪರೀಕ್ಷೆಗಳು ನಡೆಯುತ್ತವೆ. ಈ ಪರೀಕ್ಷೆಗಳು ನಡೆದ ಬಳಿಕ ರಕ್ತದಲ್ಲಿ ಯಾವುದೇ ಮಾರಕ ಅಂಶ ಪತ್ತೆಯಾಗದಿದ್ದರೆ, ನಂತರ ಅದನ್ನ ರೋಗಿಗಳಿಗೆ ವರ್ಗಾಯಿಸಲು ಆಸ್ಪತ್ರೆಗಳಿಗೆ ನೀಡಲಾಗುತ್ತದೆ.

ಇದಲ್ಲದೇ ಯಾವುದೇ ರಕ್ತವನ್ನ ಗುಂಪುಗಳಾಗಿ ವರ್ಗೀಕರಣ ಮಾಡೋದಕ್ಕೆ 2-3 ನಿಮಿಷ ಸಾಕು. ಆದ್ರೆ ದಾನಿಗಳಿಂದ ಪಡೆದ ರಕ್ತವನ್ನ ತೆಗೆದ ಮೇಲೆ ಟೆಸ್ಟ್‌ ಮಾಡಿ, ಸಪರೇಷನ್‌ ಮಾಡಿ, ಕ್ರಾಸ್‌ಮ್ಯಾಚ್‌ ಮಾಡಿ ರೋಗಿಗಳಿಗೆ ಕೊಡೋದಕ್ಕೆ 1 ಗಂಟೆಯಾದ್ರೂ ಬೇಕಾಗುತ್ತದೆ. ಎಬಿ ನೆಗೆಟಿವ್ ಅತ್ಯಂತ ಅಪರೂಪದ ರಕ್ತದ ಗುಂಪಾಗಿದೆ. ದೇಶದ ಜನಸಂಖ್ಯೆಯಲ್ಲಿ 0.5% ಮಾತ್ರ ಇದೆ. ಇದಲ್ಲದೇ ಎಲ್ಲಾ ನೆಗೆಟಿವ್‌ ಬ್ಲಡ್‌ ಗ್ರೂಪ್‌ಗಳು ರೇರ್‌ ಆಗಿದ್ದು, ಅಂಥವರ ಪಟ್ಟಿಯನ್ನ ಸಿದ್ಧಮಾಡಿದ್ದೇವೆ ಎನ್ನುತ್ತಾರೆ ಗಿರೀಶ್‌.

Share This Article