ಕೊರೊನಾ ಭೀತಿ – ತಂದೆ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್ ಮೂಲಕ ವೀಕ್ಷಣೆ

Public TV
2 Min Read

– ಒಂದೇ ಆಸ್ಪತ್ರೆಯಲ್ಲಿ ತಂದೆ-ಮಗ ಅಡ್ಮಿಟ್
– ತಂದೆ ಶವವನ್ನು ಕಿಟಿಕಿಯಿಂದ ನೋಡಿದ

ತಿರುವನಂತಪುರಂ: ಕೊರೊನಾ ಶಂಕಿತ ವ್ಯಕ್ತಿಯೋರ್ವ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗದೆ ಐಸೋಲೇಷನ್ ವಾರ್ಡಿನಲ್ಲಿ ಕುಳಿತು ವಿಡಿಯೋ ಕಾಲ್ ಮೂಲಕ ಅಂತ್ಯಕ್ರಿಯೆಯನ್ನು ವೀಕ್ಷಿಸಿರುವ ಮನಮಿಡಿಯುವ ಕಥೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ಕೇರಳದ ವ್ಯಕ್ತಿಯೋರ್ವ ಕತಾರ್ ನಿಂದ ಇಂಡಿಯಾಗೆ ಬಂದಿದ್ದರು. ಆದರೆ ವಿಧಿಯ ಆಟವೇ ಬೇರೆಯಿತ್ತು. ಕತಾರ್ ದೇಶದಲ್ಲಿ ಕೊರೊನಾ ತಾಂಡವಾಡುತ್ತಿದೆ. ಈ ವ್ಯಕ್ತಿಗೂ ಭಾರತಕ್ಕೆ ಬರುವಷ್ಟರಲ್ಲಿ ಕೊರೊನಾ ಸೋಂಕು ಇದೆ ಎಂದು ಶಂಕಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ಪರೀಕ್ಷೆ ಮುಗಿಸಿ ಬಂದಿದ್ದರು.

ತಂದೆಯನ್ನು ನೋಡಲು ಆಸ್ಪತ್ರೆಗೆ ಬಂದ ಮಗನಿಗೆ ಸ್ವಲ್ಪ ಪ್ರಮಾಣದ ಕೆಮ್ಮು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ಆಗ ತಕ್ಷಣ ಎಚ್ಚೆತ್ತ ಅವರ ಮನೆಯವರಿಂದ ದೂರ ಉಳಿದು ಡಾಕ್ಟರ್ ಬಳಿ ಹೋಗಿದ್ದರು. ಅವರನ್ನು ಚಿಕಿತ್ಸೆ ಒಳಪಡಿಸಿದ ವೈದ್ಯರು ನಿಮಗೆ ಕೊರೊನಾ ವೈರಸ್ ಇದೆ ಎಂದು ಶಂಕಿಸಿದ್ದರು. ಜೊತೆಗೆ ನೀವು ಇನ್ನೂ ಮುಂದೆ ಐಸೋಲೇಷನ್ ವಾರ್ಡಿನಲ್ಲಿ ಇರಬೇಕು ಎಂದು ಹೇಳಿದ್ದರು.

ತಾನು ಇರುವ ಪರಿಸ್ಥಿತಿಯಲ್ಲಿ ಹೊರ ಹೋಗುವುದು ಸರಿಯಲ್ಲಿ ಎಂದು ತಂದೆ ದಾಖಲಾಗಿದ್ದ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲೇ ಮಗನೂ ಕೂಡ ಐಸೋಲೇಷನ್ ವಾರ್ಡ್ ಅಡ್ಮಿಟ್ ಆಗುತ್ತಾರೆ. ಆದರೆ ತಾನೊಂದು ಬಗೆದರೆ ದೈವವೇ ಒಂದು ಬಗೆಯುತ್ತದೆ ಎಂಬ ಮಾತಿನಂತೆ, ಆತ ಐಸೋಲೇಶನ್ ವಾರ್ಡ್ ದಾಖಲಾಗುತ್ತಿದ್ದಂತೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರ ತಂದೆ ಮಾಚ್ 9ರಂದು ವಿಧಿವಶರಾಗುತ್ತಾರೆ.

ಅಂತಿಮ ವಿಧಿವಿಧಾನ ಮಾಡಬೇಕಿದ್ದ ಮಗ ವಿಧಿವಶರಾದ ತಂದೆಯ ಶವವನ್ನು ಅಂಬುಲೆನ್ಸ್‍ನಲ್ಲಿ ತೆಗೆದುಕೊಂಡು ಹೋಗುವಾಗ ಕಿಟಕಿಯಿಂದ ನೋಡಬೇಕಾದ ಪರಿಸ್ಥಿತಿ ಬಂದಿರುತ್ತದೆ. ಕ್ರೂರಿ ಕೊರೊನಾ ವೈರಸ್ ಮಹಾಮಾರಿಯ ಭೀತಿಯಿಂದ ಮುಂದೆ ನಿಂತು ತಂದೆಯ ಅಂತ್ಯಸಂಸ್ಕಾರ ಮಾಡಬೇಕಿದ್ದ ಮಗ ಐಸೋಲೇಷನ್ ವಾರ್ಡಿನಲ್ಲಿ ಕುಳಿತು ವಿಡಿಯೋ ಕಾಲ್ ಮೂಲಕ ಪಿತೃವಿಯೋಗದ ಕಾರ್ಯಕ್ರಮವನ್ನು ವೀಕ್ಷಿಸಿರುತ್ತಾರೆ.

ಈ ನೋವನ್ನು ತಮ್ಮ ಫೇಸ್‍ಬುಕ್ ಪೇಜ್ ಅಲ್ಲಿ ಹಂಚಿಕೊಂಡಿರುವ ಆತ, ನಾನು ಆಸ್ಪತ್ರೆಗೆ ದಾಖಲಾದ ಕಾರಣ ನನ್ನ ತಂದೆಯನ್ನು ನನಗೆ ಕೊನೆಯ ಬಾರಿ ನೋಡಲು ಆಗಲಿಲ್ಲ. ಆದರೆ ನಾನು ಈ ಸೋಂಕನ್ನು ಬೇರೆಯವರಿಗೆ ಹರಡುವಂತೆ ಮಾಡಲು ತಯಾರಿರಲಿಲ್ಲ. ನನ್ನ ಹಾಗೇ ಸೋಂಕು ಇರುವವರು ತಕ್ಷಣ ವೈದ್ಯರ ಬಳಿ ಹೋಗಿ. ಈಗ ನೀವು ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಕಷ್ಟಪಟ್ಟರೆ, ಮುಂದಿನ ನಿಮ್ಮ ಜೀವನವನ್ನು ನಿಮ್ಮ ಕುಟುಂಬದ ಜೊತೆ ಖುಷಿಯಿಂದ ಕಳೆಯಬಹುದು ಎಂದು ಬರೆದುಕೊಂಡಿದ್ದಾರೆ.

ನಾನು ನನ್ನ ತಂದೆ ತೀರಿಕೊಂಡ ಸಮಯದಲ್ಲಿ ಬಹಳ ಹತ್ತಿರದಲ್ಲೇ ಇದ್ದೆ. ಆದರೆ ಅವರನ್ನು ನೋಡಲು ಆಗಲಿಲ್ಲ. ನಾನು ಕೂಡ ಕೆಮ್ಮು ಜ್ವರ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗದೇ ನಮ್ಮ ಅಪ್ಪನ ಜೊತೆ ಇರಬಹುದಿತ್ತು. ಆದರೆ ಅದರಿಂದ ಆಗುವ ಪರಿಣಾಮ ನಮ್ಮ ಮನೆಯವರನ್ನು ಕಷ್ಟಕ್ಕೆ ತಳ್ಳುತ್ತಿತ್ತು. ಹಾಗಾಗಿ ನೀವು ಕೂಡ ಸೋಂಕನ್ನು ಮುಚ್ಚಿಟ್ಟುಕೊಳ್ಳಬೇಡಿ ಎಂದು ತಮ್ಮ ಅನುಭವನ್ನು ಹೇಳಿಕೊಂಡಿದ್ದಾರೆ.

ಶನಿವಾರ ಅವರ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಕೊರೊನಾ ವೈರಸ್ ನೆಗೆಟಿವ್ ಬಂದಿದೆ. ಆದರೆ ತಂದೆಯನ್ನು ಕೊನೆ ಕ್ಷಣದಲ್ಲಿ ನೋಡಲು ಆಗಲಿಲ್ಲ ಎಂಬ ನೋವಿನಲ್ಲೇ ಅವರು ಇಡಕ್ಕಿ ಜಿಲ್ಲೆಯ ತೋಡುಪುಳ ಎಂಬ ಅವರ ಗ್ರಾಮಕ್ಕೆ ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *