ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮಂಗಳಮುಖಿ ಪಾಸ್ – ಛಲ ಬಿಡದೆ ಸಾಧಿಸಿದ ಪೂಜಾ

Public TV
2 Min Read

ರಾಯಚೂರು: ಮಂಗಳಮುಖಿಯರು (Third Gender) ಎಂದರೆ ದುಡಿದು ತಿನ್ನುವವರಲ್ಲ, ಭಿಕ್ಷಾಟನೆ ಮಾಡಿಕೊಂಡೇ ಬದುಕುತ್ತಾರೆ ಎನ್ನುವ ತಪ್ಪು ತಿಳುವಳಿಕೆಯಿದೆ. ಆದರೆ ರಾಯಚೂರಿನ (Raichur) ಮಂಗಳಮುಖಿ ಪೂಜಾ ಅದನ್ನು ಸುಳ್ಳು ಮಾಡಿದ್ದಾರೆ. ಹಿಡಿದ ಹಠ ಬಿಡದೆ ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರಿಯನ್ನೇ ಗಿಟ್ಟಿಸಿಕೊಂಡು ಮಾದರಿಯಾಗಿದ್ದಾರೆ.

ಮಾನ್ವಿ ತಾಲೂಕಿನ ನೀರಮಾನ್ವಿಯ ಅಶ್ವಥಾಮ ಬೆಳೆಯುತ್ತಾ ಪೂಜಾ ಆಗಿ ಬದಲಾಗಿದ್ದಾರೆ. ಜೀವನದುದ್ದಕ್ಕೂ ಎಷ್ಟೋ ಕಷ್ಟಗಳ ನಡುವೆ ಪದವಿ ಪೂರೈಸಿ, ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ (Teacher Recruitment Exam) ಪೂಜಾ ಪಾಸ್ ಆಗಿ ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು, ಗೌರವದಿಂದ ಬದುಕಬೇಕು ಎಂದು ನಿರ್ಧರಿಸಿದ ಪೂಜಾ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು 6 ರಿಂದ 8 ನೇ ತರಗತಿ ಸಮಾಜ ವಿಜ್ಞಾನ ವಿಷಯದ ಟೀಚರ್ (Teacher) ಆಗಿ ಆಯ್ಕೆಯಾಗಿದ್ದಾರೆ. ಶೇಕಡಾ 1% ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಈ ಬಾರಿ 3 ಜನ ತೃತೀಯ ಲಿಂಗ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕೊನೆಯ ದಿನ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ

1 ರಿಂದ 10 ನೇ ತರಗತಿಯವರೆಗೆ ನೀರಮಾನ್ವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, ಮಾನ್ವಿ ಪಟ್ಟಣದಲ್ಲಿ ಪಿಯುಸಿ, ಪದವಿಯನ್ನು ಪೂರ್ಣಗೊಳಿಸಿದರು. ರಾಯಚೂರಿನಲ್ಲಿ ಬಿಎಡ್ ಪೂರ್ಣಗೊಳಿಸಿದ ಅಶ್ವಥಾಮ ಓದು ಪೂರ್ಣಗೊಳ್ಳುತ್ತಲೇ ಸಂಪೂರ್ಣವಾಗಿ ಪೂಜಾ ಆಗಿ ಬದಲಾಗಿದ್ದಾರೆ. 14 ನೇ ವಯಸ್ಸಿನ ಬಳಿಕ ತನ್ನ ದೈಹಿಕ ಬದಲಾವಣೆಗಳ ಕಾರಣಕ್ಕೆ 4 ವರ್ಷಗಳ ಕಾಲ ಮನೆ ಬಿಟ್ಟು ಹೋಗಿದ್ದ ಇವರು, ಬಳಿಕ ಮನೆಯವರು ಪ್ರೀತಿಯಿಂದ ಸ್ವಾಗತಿಸಿ ಓದಿಗೆ ಸಹಕರಿಸಿದ್ದಕ್ಕೆ ಮರಳಿ ಬಂದು ಓದು ಮುಂದುವರೆಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪೂಜಾ ಸಾಧನೆಗೆ ಕುಟುಂಬದ ಸದಸ್ಯರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಸಾಧಿಸುವ ಛಲ ಇದ್ದರೆ ಎಂತಹ ಅವಮಾನ, ಲಿಂಗಬೇಧವನ್ನೂ ಮೆಟ್ಟಿ ನಿಲ್ಲಬಹುದು ಎನ್ನುವುದನ್ನು ಪೂಜಾ ಸಾಧಿಸಿ ತೋರಿಸಿದ್ದಾರೆ. ಅವಮಾನ ಮಾಡಿದವರ ಮುಂದೆ ತಲೆ ಎತ್ತಿ ಓಡಾಡಬಹುದು ಅನ್ನೋದನ್ನು ನಿರೂಪಿಸಿದ್ದಾರೆ. ಮಂಗಳಮುಖಿಯರಿಗೆ ಮಾತ್ರವಲ್ಲದೆ ಅಸಹಾಯಕರು ಅಂದುಕೊಳ್ಳುವವರಿಗೆಲ್ಲಾ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಆತಂಕದ ನಡುವೆ ಮಂಗ್ಳೂರಿನ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *