ಮಡಿಕೇರಿ: ಕೊಡಗಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ PPP (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಕಾರ್ಡಿಯಾಕ್ ಯೂನಿಟ್ (ಕ್ಯಾತ್ ಲ್ಯಾಬ್ – Cardiac Unit) ಸ್ಥಾಪಿಸಲು ತಯಾರಿ ನಡೆದಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Sharanprakash Patil) ಅವರ ಅಧ್ಯಕ್ಷತೆಯಲ್ಲಿಂದು ವಿಕಾಸ ಸೌಧದಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸುವ ಸಂಬಂಧ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ (Mantar Gowda) ಅವರು ಪಾಲ್ಗೊಂಡು ಯೋಜನೆ ಕಾರ್ಯಗತಗೊಳಿಸುವ ಸಂಭಂಧ ಚರ್ಚಿಸಿದರು.
ಇದಕ್ಕೆ ಸಚಿವರು ಯೋಜನೆ ಪ್ರಗತಿ ವಿವರ ಪರಿಶೀಲಿಸಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾತ್‌ಲ್ಯಾಬ್ ಸ್ಥಾಪಿಸುವ ಸಂಬಂಧ ಅಗತ್ಯ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಿ, ಟೆಂಡರ್ ಆಹ್ಚಾನಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ಡಾ. ವೆಂಕಟೇಶ್ ಮೂರ್ತಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಡಾ.ಸುಜಾತ ರಾಥೋಡ್, ರಾಜ್ಯ ಪಿಪಿಪಿ ಕೋಶದ ನಿರ್ದೇಶಕ ಪುರುಷೋತ್ತಮ್ ಸಿಂಗ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಎ.ಜೆ ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.