ಮೈಸೂರು: ಗೋ ಮಾಂಸಕ್ಕಾಗಿ ಹಸುಗಳ ಕಳ್ಳತನ ಶುರುವಾಗಿದ್ದು, ಹಸುಗಳನ್ನು ಕದ್ದು ನಂತರ ಅವುಗಳ ಚರ್ಮ ಸುಲಿದು ಮಾಂಸ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ದಡದಹಳ್ಳಿಯಲ್ಲಿ ಬುಧವಾರದಂದು ನಡೆದಿದೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜನರನ್ನು ಗೋಮಾಫಿಯಾ ಬೆಚ್ಚಿಬೀಳಿಸಿದೆ. ಒಂದೇ ದಿನದಲ್ಲಿ ದಡದಹಳ್ಳಿಯಲ್ಲಿ ಖದೀಮರು ಐದು ಹಸುಗಳನ್ನು ಕದ್ದು, ಅವುಗಳ ಮಾಂಸ ತೆಗೆದುಕೊಂಡು ಹೋಗಿದ್ದಾರೆ. ರೈತ ಮಹಿಳೆ ಚಿಕ್ಕಸಣ್ಣಮ್ಮ ಅವರಿಗೆ ಸೇರಿದ ಎರಡು ಹಸು, ರೈತ ಶಿವರಾಮು ಅವರ ಒಂದು ಹಸು, ರೈತ ನಾಗರಾಜು ಅವರು ಎರಡು ಹಸು ಕಳ್ಳತನವಾಗಿವೆ. ಹಸುಗಳನ್ನು ಕದ್ದು ಅದೇ ಊರಿನ ಹೊರವಲಯದಲ್ಲಿ ಅವುಗಳ ಚರ್ಮ ಸುಲಿದು ಮಾಂಸವನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆಯಿಂದ ದಡದಹಳ್ಳಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಎರಡು ದಿನಗಳ ಹಿಂದೆ ಮಾಂಸಕ್ಕಾಗಿ ಎತ್ತುಗಳ ಕಳ್ಳತನ ನಡೆದಿತ್ತು. 80 ಸಾವಿರ ಬೆಲೆ ಬಾಳುವ ಜೋಡಿ ಎತ್ತುಗಳನ್ನು ಕದ್ದು ಊರ ಹೊರಗೆ ಅವುಗಳನ್ನು ಕೊಂದು ಚರ್ಮ ಸುಲಿದು ಮಾಂಸವನ್ನು ತೆಗೆದುಕೊಂಡು ಹೋಗಿದ್ದರು. ಈಗ ಮತ್ತೆ ಇಂತಹ ಭಯಾನಕ ಘಟನೆ ಜರುಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಈ ಘಟನೆ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv