ಬೆಂಗಳೂರು: ಇಷ್ಟು ದಿನ ಡಕ್ ಮಂಜ, ಪಾರಿವಾಳ ಮಂಜ ತಮ್ಮ ವಿಚಿತ್ರವಾದ ಅಪರಾಧ ಶೈಲಿಯಿಂದ ಕುಖ್ಯಾತರಾಗಿದ್ದರು. ಆದರೆ ಇವರ ಸಾಲಿಗೆ ಈಗ ಮತ್ತೊಬ್ಬ ನಟೋರಿಯಸ್ ಎಂಟ್ರಿಯಾಗಿದ್ದು, ಅವನೇ ಕಿಟಕಿ ಮಂಜ. ಕಿಟಕಿ ತೆಗೆದಿರುವ ಮನೆಗಳನ್ನೆ ಟಾರ್ಗೆಟ್ ಮಾಡುವುದು ಇವನ ಕಳ್ಳತನದ ಶೈಲಿ. ಇಂತಹ ವಿಚಿತ್ರವಾದ ಕಳ್ಳತನ ಮಾಡುತ್ತಿದ್ದ ಕಿಟಕಿ ಮಂಜನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮೂಲದವನಾದ ಮಂಜ, ನಗರದಲ್ಲಿ ಗುರು ಎಂಬಾತನನ್ನ ಸಹಚರನನ್ನಾಗಿ ಮಾಡಿಕೊಂಡು ಫ್ಲವರ್ ಡೆಕೊರೇಟ್ ಕೆಲಸ ಮಾಡುತ್ತಿದ್ದನು. ಹೀಗಿದ್ದವನು ತಾನು ಓಡಾಡುವ ಏರಿಯಾಗಳನ್ನ ಸರಿಯಾಗಿ ಸರ್ವೆ ಮಾಡುತ್ತಿದ್ದನು. ಬಳಿಕ ಗುರುವನ್ನ ಜೊತೆ ಸೇರಿಸಿಕೊಂಡು ರಾತ್ರಿ ಮನೆಯಲ್ಲಿ ಮಲಗಿದ್ದವರ ಕತ್ತಿನಲ್ಲಿದ್ದ ಚೈನ್, ಉಂಗುರ ಸೇರಿದಂತೆ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದನು.
ನಗರದಲ್ಲಿ ಕೆಲವರು ಮನೆಯ ಕಿಟಕಿಗಳನ್ನು ತೆಗೆದು ಮಲಗಿಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದೇ ಮನೆಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಮಂಜ ರಾತ್ರಿ ಮನೆಗೆ ನುಗ್ಗುತ್ತಿದ್ದನು. ಕಿಟಕಿ ತೆಗೆದಾಗ ಕೈಗೆ ಸಿಗುವ ಮೊಬೈಲ್ ಅಥವಾ ಬೆಲೆಬಾಳುವ ಯಾವುದೇ ವಸ್ತುಗಳನ್ನು ಕದಿಯುತ್ತಿದ್ದನು. ಒಂದು ಸಾರಿ ಮಂಜನಿಗೆ ಕಾರ್ ಕೀ ಸಿಕ್ಕಿದ್ದರಿಂದ ಕಾರು ಕದ್ದು ಎಸ್ಕೇಪ್ ಆಗಿದ್ದನು. ಸದ್ಯ ಗಿರಿನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಸದ್ಯ ಪೊಲೀಸರು ಮಂಜ ಮತ್ತು ಗುರುವನ್ನು ಇಬ್ಬರು ಬಂಧಿಸಿದ್ದಾರೆ. ಆರೋಪಿಗಳಿಂದ ಇನ್ನೋವಾ ಕಾರು, 5 ಮೊಬೈಲ್ ಹಾಗೂ ಎರಡು ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.