ಶಾರ್ಟ್‌ಕಟ್‌ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್‌ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ‍್ಯಾಪಿಡೊ ಚಾಲಕ ಸುಹಾಸ್‌

Public TV
1 Min Read

– ಯುವತಿ ಮೇಲಿನ ಹಲ್ಲೆ ಕೇಸ್‌ಗೆ ಟ್ವಿಸ್ಟ್‌

ಬೆಂಗಳೂರು: ಯುವತಿ ಮೇಲೆ ರ‍್ಯಾಪಿಡೊ (Rapido) ಬೈಕ್‌ ಚಾಲಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಮೊದಲು ಆ ಯುವತಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದು ಎಂದು ಬೈಕ್‌ ಚಾಲಕ (Bike Rider) ಸುಹಾಸ್‌ ಆರೋಪಿಸಿದ್ದಾನೆ.

ವಿಡಿಯೋವೊಂದರಲ್ಲಿ (Viral Video) ಮಾತನಾಡಿರುವ ಬೈಕ್‌ ಚಾಲಕ ಸುಹಾಸ್‌, ಮೊದಲು ಆ ಹುಡುಯೇ ನನ್ನ ಮೇಲೆ ಹಲ್ಲೆ ಮಾಡಿದ್ದು. ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದು ಆ ಯುವತಿಯೇ. ಶಾರ್ಟ್‌ಕಟ್‌ನಲ್ಲಿ ಬಂದೆ ಅಂತ ಅರ್ಧ ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ಬೈದ್ರು. ನಾನು 5 ವರ್ಷದಿಂದ ರ‍್ಯಾಪಿಡೋ ಓಡಿಸ್ತಾ ಇದ್ದೇನೆ, ದಾರಿ ಗೊತ್ತು ಅಂದೆ. ಗಾಡಿ‌ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ನನಗೆ ಕೆಟ್ಟದಾಗಿ ಬೈದರು, ಟಿಫಿನ್ ಬಾಕ್ಸ್‌ನಲ್ಲಿ ಹೊಡೆದ್ರು ಎಂದು ಆರೋಪಿಸಿದ್ದಾನೆ.

ಅಷ್ಟು ಜನರ ಮುಂದೆ ಹೊಡೆದಿದ್ದರಿಂದ ನಾನೂ ಸಿಟ್ಟಿನಲ್ಲಿ ಹೊಡೆದೆ. ಆಮೇಲೆ ನಾನು ಅವರು ಕೆಲಸ ಮಾಡುವ ಸ್ಟೋರ್‌ಗೆ ಹೋದೆ. ಹೋಗಿ ಅಲ್ಲಿನ ಮ್ಯಾನೇಜರ್‌ಗೆ ದೂರು ನೀಡಿದೆ. ಅದಕ್ಕೆ ಮ್ಯಾನೇಜರ್ ಅಂದರು ಅವಳು ಸೈಕೋ, ಇಲ್ಲೂ ಹುಚ್ಚುಚ್ಚಾಗಿ ಆಡ್ತಾ ಇರ್ತಾಳೆ ಅಂದ್ರು. ಅದಕ್ಕೆ ನಾನು ವಾಪಸ್ ಬಂದೆ, ಈಗ ವಿಡಿಯೋ ವೈರಲ್ ಆದ್ಮೇಲೆ ಪೊಲೀಸರು ಕಾಲ್ ಮಾಡಿದ್ರು. ತನಿಖೆಗೆ ಸಹಾಕರ ನೀಡ್ತೆನೆ ಎಂದು ಹೇಳಿದ್ದಾರೆ.

ಏನಾಗಿತ್ತು?
ಶ್ರೇಯಾ ಅನ್ನೋ ಯುವತಿ ರ‍್ಯಾಪಿಡೊ ಬುಕ್ ಮಾಡಿದ್ರು. ಬೈಕ್ ಚಾಲಕ ಸುಹಾಸ್ ಮಹಿಳೆಯನ್ನ ಕೂರಿಸಿಕೊಂಡು ಡ್ರೈವ್ ಮಾಡುವಾಗ ಓವರ್ ಸ್ಪೀಡ್‌ನಲ್ಲಿ ಬೈಕ್ ಚಲಾಯಿಸಿದ್ದ. ಆಗ ಓವರ್ ಸ್ಪೀಡಾಗಿ ಹೋಗದಂತೆ ಶ್ರೇಯಾ ಎಚ್ಚರಿಕೆ ನೀಡಿದ್ದಾಳೆ. ಇದೇ ವಿಚಾರಕ್ಕೆ ಶ್ರೇಯಾ ಮತ್ತು ಸುಹಾಸ್ ನಡುವೆ ಕಿರಿಕ್ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಸುಹಾಸ್, ಶ್ರೇಯಾಳ ಕಪಾಳಕ್ಕೆ ರಪ್ ಅಂತ ಬಾರಿಸಿದ್ದ. ಬಳಿಕ ಸ್ಥಳೀಯರು ಶ್ರೇಯಾಳನ್ನ ರಕ್ಷಣೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿತ್ತು.

Share This Article