ಮೊಘಲರು ಬರೋದಕ್ಕಿಂತ ಮೊದಲು ‘ಹಿಂದೂ’ ಪದವೇ ಇರಲಿಲ್ಲ: ಕಮಲ್ ಹಾಸನ್

Public TV
1 Min Read

ನವದೆಹಲಿ: ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು, ‘ಹಿಂದೂ’ ಪದದ ಮೂಲದ ಕುರಿತು ಮಾತನಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಹಿಂದೂ ಎಂಬ ಪದವು ವಿದೇಶದಿಂದ ಬಂದಿದೆ. ಭಾರತಕ್ಕೆ ಮೊಘಲರು ಬರುವ ಮೊದಲು ‘ಹಿಂದೂ’ ಪದವೇ ಇರಲಿಲ್ಲ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಸಾವಿರಾರು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿದ್ದ ಆಳ್ವಾರರು (ತಮಿಳು ಕವಿಗಳು/ಭಕ್ತರು) ಅಥವಾ ನಾಯನಾರ (ಶಿವ ಭಕ್ತರು)ರು ಕಾಲದ ವೈಷ್ಣವ ಹಾಗೂ ಶೈವ ಕವಿಗಳು ಹಿಂದೂ ಪದ ಬಳಕೆ ಮಾಡಿಯೇ ಇಲ್ಲ ಎಂದು ಹೇಳಿದ್ದಾರೆ.

‘ಹಿಂದೂ’ ಪದ ಭಾರತದ್ದಲ್ಲ, ವಿದೇಶದಿಂದ ಬಂದಿರುವುದಾಗಿದೆ. ಮೊಘಲರೋ ಅಥವಾ ಭಾರತಕ್ಕೆ ಬಂದ ಯಾರೋ ಈ ಪದವನ್ನು ನೀಡಿದ್ದಾರೆ. ಅಲ್ಲಿಯವರೆಗೂ ಭಾರತದಲ್ಲಿ ಹಿಂದೂ ಪದದ ಬಳಕೆಯೇ ಇರಲಿಲ್ಲ. ಹೀಗಾಗಿ ನಮಗೆ ಸಾಕಷ್ಟು ಗುರುತುಗಳಿದ್ದರೂ, ಪದಗಳಿದ್ದರೂ ಸಹ ಯಾರೋ ವಿದೇಶಿಗರು ಹೇಳಿದ ಪದವನ್ನು ಒಂದು ಧರ್ಮ ಹಾಗೂ ದೇಶವನ್ನು ಗುರುತಿಸಲು ನಾವೇಕೆ ಬಳಸಬೇಕು ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು, ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಮಧುರೈ ವಿಧಾನಸಭಾ ಚುನಾವಣೆ ಕ್ಷೇತ್ರ ವ್ಯಾಪ್ತಿಯ ತಿರುಪ್ಪರಾನ್‍ಕುಂದ್ರಮ್‍ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದ. ಆದರೆ ಅದು ಕಮಲ್ ಹಾಸನ್ ನಿಂತಿದ್ದ ವಾಹನಕ್ಕೆ ತಾಗಿ ಕೆಳಕ್ಕೆ ಬಿದ್ದಿತ್ತು. ಅಷ್ಟೇ ಅಲ್ಲದೆ ಶುಕ್ರವಾರ ಮೊಟ್ಟೆ ಹಾಗೂ ಕಲ್ಲು ಎಸೆಯಲಾಗಿದೆ. ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *