ಮೋದಿ ವಿರುದ್ಧ ಮಾತನಾಡಲು ಏನಿಲ್ಲವೆಂದು ಸಂವಿಧಾನ ಬದಲಾವಣೆಯ ಭಯ ಹುಟ್ಟಿಸುತ್ತಾರೆ: ಬೊಮ್ಮಾಯಿ

Public TV
2 Min Read

– ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ

ಹಾವೇರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಮಾತನಾಡಲು ಏನೂ ಇಲ್ಲದ ಕಾರಣ ಸಂವಿಧಾನ ಬದಲಾಯಿಸುತ್ತಾರೆ ಎಂದು ರಾಜಕೀಯವಾಗಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಸವಣೂರಿನಲ್ಲಿ ಚುನಾವಣಾ ಪ್ರಚಾರಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲು ಮಾಡುವ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಡಿ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರಿಗೆ ಮೋದಿಯವರ ವಿರುದ್ಧ ಹೇಳಲು ಏನೂ ಇಲ್ಲ. ಕಳೆದ ಬಾರಿ ಇದನ್ನೇ ಹೇಳಿದ್ದರು. ಸಂವಿಧಾನ ಬದಲು ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ. ಎಲ್ಲದಕ್ಕೂ ಕಾನೂನು ಅಂತ ಇದೆ. ಸಂವಿಧಾನ ಬದಲು ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಸುಮ್ಮನೆ ರಾಜಕೀಯ ಭಯ ಹುಟ್ಟಿಸಲು ಈ ರೀತಿ ಹೇಳುತ್ತಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಶಾಶ್ವತ ಕೆಲಸ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನಾಲ್ಕು ಹೋಟೆಲ್‌.. ನಾನಾ ವೇಷ; ಪಶ್ಚಿಮ ಬಂಗಾಳದಲ್ಲಿ ಕೆಫೆ ಬಾಂಬರ್‌ಗಳ ಕಣ್ಣಾಮುಚ್ಚಾಲೆ ಆಟ!

ಭಾರತ ಮಾತಾ ಕೀ ಜೈ ಎನ್ನುವುದು ಬಿಜೆಪಿಯ ಅಪ್ಪನ ಮನೆ ಆಸ್ತಿನಾ ಎಂಬ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತಿಗೆ ತಿರಗೇಟು ನೀಡಿದ ಅವರು, ಅವರ ಹೇಳಿಕೆ ಸರಿಯಾಗಿದೆ, ತಪ್ಪೇನೂ ಇಲ್ಲ. ಭಾರತ ಮಾತಾ ಕಿ ಜೈ ಎಂದು ಕೂಗಲು ಭಾರತದ ಮಕ್ಕಳಿಗೆ ಅಧಿಕಾರ ಇದೆ. ಕಾಂಗ್ರೆಸ್‌ನವರು ಕೂಗಲಿ ನಾವು ಸ್ವಾಗತ ಮಾಡುತ್ತೇವೆ. ಭಾರತ ಮಾತೆ ಇನ್ನೂ ಖುಷಿ ಆಗುತ್ತಾಳೆ ಎಂದರು. ಭಾರತ ಮಾತಾ ಕಿ ಜೈ ಎಂದು ಹೇಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ಕೇಳಿರುವುದು ಅಲ್ಲಿರುವವರ ಮನಸ್ಥಿತಿ ಏನು ಎಂದು ಬಿಂಬಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕರೆ ಬಂದ ಮೂರೇ ನಿಮಿಷಕ್ಕೆ ಹಣವಿದ್ದ ಬೆಂಜ್ ಕಾರು ಬಳಿಗೆ ಬಂದ್ವಿ: ಮುನೀಶ್ ಮೌದ್ಗಿಲ್

ಬಿಜೆಪಿ 400 ಸೀಟು ಗೆಲ್ಲುವುದಿಲ್ಲ. ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಿಎಂ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರ ಎಲೆಯೊಳಗೆ ಕಲ್ಲು ಬಿದ್ದಿದೆ. ಅವರು ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳಿಗೆ. ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ನಾವು 100% 370 ಸೀಟು ದಾಟುತ್ತೇವೆ. ಕೇಂದ್ರದಲ್ಲಿ ಮತ್ತೆ ನಮ್ಮ ಬಿಜೆಪಿ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಜ್ರಿವಾಲ್ ನೇರ ಭೇಟಿಗೆ ಪತ್ನಿ ಸುನಿತಾಗೆ ಅನುಮತಿ ನಿರಾಕರಿಸಿದೆ: ತಿಹಾರ್ ಅಧಿಕಾರಿಗಳ ವಿರುದ್ಧ ಆಪ್ ಆರೋಪ

ಇದೇ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಫೋನ್ ಕದ್ದಾಲಿಕೆಯ ಆರೋಪದ ಕುರಿತು ಮಾತನಾಡಿದ ಅವರು, ಫೋನ್ ಕದ್ದಾಲಿಕೆಯ ಬಗ್ಗೆ ಆರೋಪ ಪ್ರತ್ಯಾರೋಪ ಇವೆ. ಯಾವುದಕ್ಕೂ ಸ್ಪಷ್ಟತೆ ಇಲ್ಲ. ಸ್ಪಷ್ಟತೆ ಇದ್ದಾಗ ಮಾತ್ರ ಅದರ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಥರ ಸಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆಗುತ್ತಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಜನರು ತಿರ್ಮಾನ ಮಾಡಿದರೆ ಯಾಕೆ ಆಗಬಾರದು ಆಗಲಿ ಬಿಡಿ ಎಂದು ಹೇಳಿದರು. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

Share This Article