ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಷಣ ನೋಡಿದ್ರೆ ನೋವಿನ ಛಾಯೆ ಕಾಣ್ತಿಲ್ಲ: ಸಿಎಂ ಎಚ್‍ಡಿಕೆ

Public TV
2 Min Read

ಮಂಡ್ಯ: ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಭಾಷಣ ಮಾಡಿದ ವಿಡಿಯೋವನ್ನು ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಅದನ್ನು ನೋಡಿದರೆ ಅವರಲ್ಲಿ ಯಾವುದೇ ನೋವಿನ ಛಾಯೆ ಕಾಣುತ್ತಿಲ್ಲ. ಜಿಲ್ಲೆಯ ಜನರು ಅನುಭವಿಸುತ್ತಿರುವ ನೋವಿನ ಛಾಯೆಯು ಅವರ ಮುಖದಲ್ಲಿ ಇಲ್ಲ. ಕೇವಲ ನಾಟಕೀಯ ಸಿನಿಮಾ ಡೈಲಾಗಷ್ಟೇ ಎಂದು ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರ ಹೆಸರನ್ನು ಪ್ರಸ್ತಾಪ ಮಾಡದೆಯೇ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದ ಮಾದೇಗೌಡರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಮಂಡ್ಯ ರಾಜಕೀಯದಲ್ಲಿ ಮಾದೇಗೌಡರು ಅತ್ಯಂತ ಹಿರಿಯ ರಾಜಕಾರಣಿ. ನಮ ತಂದೆಯ ಸಮಕಾಲೀನರಾಗಿ ರಾಜಕೀಯ ಮಾಡಿದ್ದಾರೆ. ಅವರು ಕಾಂಗ್ರೆಸ್ ನಲ್ಲಿದ್ದು, ಆಶೀರ್ವಾದ ಪಡೆಯಲು ಬಂದಿದ್ದೇನೆ. ಅವರಿಂದ ಕೂಡ ಸಲಹೆ ಪಡೆದಿದ್ದು, ನಿಖಿಲ್ ಕೂಡ ಮಾದೇಗೌಡರ ಆಶೀರ್ವಾದ ಪಡೆದು ಹೋಗಿದ್ದಾನೆ. ಅವರು ಕೂಡ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ ಎಂದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾರ ಪಾಲಹಳ್ಳಿಯ ಭಾಷಣ ನೋಡಿದ್ದೇನೆ. ಯಾವುದೇ ನೋವಿನ ಛಾಯೆಗಳು ಕಾಣುತ್ತಿಲ್ಲ. ನಾಟಕ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಹಣ ತಗೊಂಡು ಮಜಾ ಮಾಡಿ, ವೋಟ್ ಮಾತ್ರ ನನಗೆ ಹಾಕಿ ಹೇಳಿದ್ದಾರೆ. ಜಿಲ್ಲೆಯ ಜನರಿಗೆ ಅದನ್ನು ಸದುಪಯೋಗ ಪಡಿಸಿಕೊಳ್ಳಲಿ ಎಂದು ಹೇಳುತ್ತಿದ್ದಾರೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಂಡ ವೇಳೆ ನೊಂದ ಜನರಿಗೆ ನಾನು ಆರ್ಥಿಕ ಸಹಾಯ ಮಾಡಿದ್ದೇನೆ ವಿನಃ ಮಜಾ ಮಾಡಲು ದುಡ್ಡು ಕೊಟ್ಟಿಲ್ಲ. ಅವರ ಸಂಕಷ್ಟ ನೋಡಿ ಹಣ ಕೊಟ್ಟಿದ್ದೀನಿ. ಅವರು ಇನ್ನೊಬ್ಬರು ಹಣ ಪಡೆದು ಮಜಾ ಮಾಡಿಕೊಂಡು ಬರುವ ಸಂಸ್ಕೃತಿಯಿಂದ ಬಂದಿದ್ದಾರೆ ಎಂದರು.

ಮಜಾ ಮಾಡುವ ಸಂಸ್ಕೃತಿ:
ಜಿಲ್ಲೆಯ ಜನತೆ ಬಳಿ ಡ್ರಾಮಾಗಳು ನಡೆಯಲ್ಲ. ಕೆ ಆರ್ ಪೇಟೆ ಕಾರ್ಯಕ್ರಮ ಮಾಡಿದ್ದಾರಲ್ಲ, ಯಾವ ಹೋಟೆಲ್ ನಲ್ಲಿ ಇದ್ದುಕೊಂಡು ದುಡ್ಡು ಕೊಟ್ಟಿದ್ದಾರೆ. ಪಾಲಹಳ್ಳಿಯಲ್ಲೂ ಕೂಡ ಹಣ ಕೊಟ್ಟಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಜಿಲ್ಲೆ ಜನರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಇವರಿಗೆ ಮತ ಹಾಕುತ್ತಾರೆ? ಮೈ ಶುಗರ್ ಬಾಕಿ ಬಿಡುಗಡೆಗೆ ಹಣ ಕೊಡೋದಕ್ಕೆ ಮುಂದಾಗಿದ್ದೆ, ಅದಕ್ಕೆ ಚುನಾವಣಾ ಆಯೋಗ ಬೇಡ ಅಂತು. ನಾನು ರೈತರ ಕಷ್ಟಕ್ಕೆ ಸ್ಪಂದಿಸಲು ದುಡ್ಡು ಬಿಡುಗಡೆ ಮಾಡಿ ಎಂದು ಹೇಳಿದ್ದೇನೆ. ಸಂಕಷ್ಟದಲ್ಲಿ ಇರುವವರಿಗೆ ನೆರವು ಕೊಟ್ಟು ಕುತಂತ್ರದ ರಾಜಕೀಯದಲ್ಲಿ ಇದುವರೆಗೂ ಬಂದಿದ್ದೇನೆ.

ಅನುಕಂಪದ ಹೆಸರಿನಲ್ಲಿ ಮತ ಕೇಳಲು ಬಂದಿದ್ದಾರೆ. ನನ್ನ ಜೋಡೆತ್ತು ಹೇಳಿಕೆಯನ್ನು ತಿರುಚಿದ್ದಾರೆ ಅಷ್ಟೇ. ಅಲ್ಲದೇ ಅವರ ಫೋನ್ ಕದ್ದಾಲಿಕೆ ಮಾಡಲು ನಾನು ಯಾರಿಗೂ ಹೇಳಿಲ್ಲ. ಬಿಜೆಪಿಗೆ ಹೇಳಿ ಮೋದಿ ಕೈಯಿಂದ ತನಿಖೆ ಮಾಡಿಸಲಿ. ನಾನು ಯಾರಿಗೂ ಕೂಡ ಫೋನ್ ಕದ್ದಾಲಿಕೆಗೆ ಅವಕಾಶ ನೀಡಿಲ್ಲ. ಸಿಎಂ ಮಗ ಗೆದ್ದರೆ ಮಾತ್ರ ಅಭಿವೃದ್ಧಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಕ್ಷದ ಕಾರ್ಯಕರ್ತರ ನಿರ್ಧಾರದಿಂದ ನಿಖಿಲ್ ನಿಲ್ಲಿಸಿದ್ದೇವೆ. ನಾನು ಎಲ್ಲೂ ಕೂಡ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಅವರು ನಾಮಿನೇಷನ್ ಸಲ್ಲಿಸಿದ ಸಂದರ್ಭದಲ್ಲಿ ಒಂದು ಗಂಟೆ ಕರೆಂಟ್ ಕಟ್ ಆಗಿತ್ತು. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಟ್ರಾನ್ಸ್‍ಫರಮ್ ಕೆಟ್ಟಿತ್ತು ಎಂದು ಉತ್ತರ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *